ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 19, 2010

...ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದಾ!!


"ಬಾನದಾರಿ ಸೂರಿ ಜಾರಿ ಹೋದಾ, ಚಂದ ಮೇಲೆ ಬಂದಾ, ಮಿನ್ನುಗಾರೆ ಅಂದಾ , ನೋಡು ಎಂಥ ಚಂದಾ,ರಾತಿಯಾಯ್ತು ಮಲಗು ನನ್ನ ಪುಟ್ಟ ಕಂದಾ"  ಇದೇನು ಇಷ್ಟು ತೊದಲು ತೊದಲಾಗಿ, ತಪ್ಪು ತಪ್ಪಾಗಿ ಬರೆಯುತ್ತಿದ್ದಾಳೆ ಅಂದುಕೊಂಡ್ರಾ? ಒಂದೂವರೆ ವರ್ಷದ ಮಗು ಇದಕ್ಕಿಂತ ಚೆನ್ನಾಗಿ ಬರೆಯಲು ಸಾಧ್ಯಾನ? ಹಾಗಾದರೆ ಬರೆಯಿತ್ತಿರೋಳು ಒಂದೂವರೆ ವರ್ಷದ ಮಗುನಾ ಅಂದುಕೊಂಡ್ರೆ ಅದು ತಪ್ಪು ಕಣ್ರೀ !! ಇದನ್ನು ಬರೆಯುತ್ತಿರೋಳು, ಅಂಥದೇ ಒಂದು ಮುದ್ದು ಮಗುವಿನ ಪ್ರೀತಿಯ ಅಮ್ಮ.



ಈಗ ಹಿಂದಿನ ಅಲ್ಲಾ, ಅದರ ಹಿಂದಿನ ಭೂಮಿ ಹುಣ್ಣಿಮೆಯಂದು ಆಯ್ತು ನನ್ನ ಪುಟ್ಟ ಚಂದಿರ "ಚಿರಾಗ್ " ನ ಉದಯ. ಇವತ್ತು ಎರಡನೆಯ ಭೂಮಿ ಹುಣ್ಣಿಮೆ ಸಮೀಪಿಸುತ್ತಿರುವ ಸಮಯದಲ್ಲಿ, "ಬಾನದಾರಿಯಲ್ಲಿ  ..." ಹೇಳುವಷ್ಟು ದೊಡ್ಡವನಾಗಿದ್ದಾನೆ ಅಂದರೆ ನಂಬಲೇ ಬೇಕಾದ ಸತ್ಯ. ನಿಜ, ಮಕ್ಕಳೇ ಹಾಗೆ ಅಲ್ಲವೇ ? ನೋಡ ನೋಡುತ್ತಾ ಅಂಬೆಗಾಲಿಕ್ಕಿ, ಕುಳಿತು, ನಿಂತು, ಎದ್ದು ಓಡಾಡಲು ಪ್ರಾರಂಭಿಸಿ ಬಿಡುತ್ತಾರೆ. ಎಲ್ಲ ನಿನ್ನೆ ಮೊನ್ನೆಯ ಹಾಗೆ ಅನಿಸುತ್ತದೆ.

ಒಂದು ಅಧ್ಯಯನದ ಪ್ರಕಾರ, ಮಕ್ಕಳು ಬೆಳೆದಂತೆ, ಬರಿಯ ದೈಹಿಕ ಬೆಳವಣಿಗೆ ಅಷ್ಟೇ    ಅಲ್ಲ, ಮಾನಸಿಕವಾಗಿಯೂ ಅಲ್ಲೊಂದು ವ್ಯಕ್ತಿ ರೂಪುಗೊಳ್ಳುತ್ತಿರುತ್ತಾನೆ. ಪ್ರತಿಯೊಂದು ನಿಮಿಷವೂ ಹೊಸದನ್ನು ಕಲಿಯುವ, ತಿಳಿಯುವ ಕುತೂಹಲ. ಬಹುಷಃ ಪ್ರಪಂಚದಲ್ಲಿ ಮಕ್ಕಳಷ್ಟು ದೊಡ್ಡ ವಿಜ್ಞಾನಿಗಳು ಬೇರೊಬ್ಬರು ಇರಲಾರರು, ಜೀವನವೇ ಒಂದು ಪ್ರಯೋಗಶಾಲೆ ಅವರಿಗೆ.

  
ಪ್ರತಿಯೊಂದು  ಮಗುವಿನ ನಿಜವಾದ ಬೆಳವಣಿಗೆ ಗರ್ಭದೊಳಗಿಂದ ಶುರು ಎಂದು ಎಲ್ಲೋ ಓದಿದ್ದ ನಾನು, ನಮ್ಮ ಮನೆಯವರು ಹೊಟ್ಟೆಯೊಳಗಿನ ಕೂಸಿನೊಂದಿಗೆ ಮಾತನಾಡುತ್ತಿದ್ದ ಪರಿ ಕಂಡು,ಕೆಲವರು ನಕ್ಕಿದ್ದುಂಟು.ಆದರೆ ಅದರ ಪರಿಣಾಮವೇ ,ನಮ್ಮ ಮಗ ವರ್ಷದೊಳಗೆ ಮಾತನಾಡುವಂತೆ ಮಾಡಿತೆಂದು ನಾವು ಖುಷಿ ಪಡುತ್ತೇವೆ.ಇನ್ನು ನೆನಪಿನ ಶಕ್ತಿ ಚೆನ್ನಗಿರಲೆಂದು ಗರ್ಭಿಣಿಯಿದ್ದಾಗ ಒಂದೆಲಗದ ಕಷಾಯ, ರಸ ಸೇವನೆ, ಉನ್ನತ ವಿಚಾರ, ಸಂಗೀತ ಆಲಿಕೆ,ಒಳ್ಳೆಯ ಪುಸ್ತಕಗಳ ಓದು ಹೀಗೆ ಹತ್ತು ಹಲವು ಸರ್ಕಸ್ ಗಳು.  ಇಲ್ಲಿ ಒಂದು ಚಿಕ್ಕ ವಿಷಯ ನೆನಪಾಗುತ್ತಿದೆ. ಗರ್ಭಿಣಿಯಿದ್ದಾಗ ಮಲಗುವ ಕೋಣೆಯನ್ನು ಮಕ್ಕಳ ಇಲ್ಲಾ ದೇವರ ಪಟಗಳನ್ನು ಹಾಕಿ ಸಿಂಗರಿಸುವುದು ಸಾಮಾನ್ಯ. ಆದರೆ ನನಗೆ ಅನಿಸಿದ್ದು, ಮತ್ತು ಹಾಕಿದ್ದು, ಫ್ರಾನ್ಸ್ ದೇಶದ, Le Mount Blanc (ಲೀ ಮೌಮ್ ಲಾ) ಚಿತ್ರವನ್ನು. ಏಕೆಂದರೆ, ನಾನು ಅದನ್ನು ನೋಡುತ್ತಿದ್ದರೆ, ನನ್ನ ಮಗ ಅಲ್ಲಿನ ಹಿಮದ ರಾಶಿಯಂತೆ ಶೀತಲ ಮನಸ್ಸಿನವನಾಗಿ, ಮುಗಿಲೆತ್ತರಕ್ಕೆ ಕೀರ್ತಿ ಶಿಖರವೇರಿ, ಆ ಪರ್ವತದಷ್ಟು ವಿಶಾಲವಾದ ಮನೋಭಾವದವನಾಗಲಿ ಎಂದು. ಮೊದಲೇ ತಾಯಂದಿರು ಮಕ್ಕಳ ವಿಷಯದಲ್ಲಿ ಸ್ವಾರ್ಥಿಯರು, ನನ್ನದು ಸ್ವಲ್ಪ ಅತಿಯಾಯಿತು ಅನಿಸುತ್ತಾ?

ತೊದಲು ನುಡಿ, ಪುಟ್ಟ ಪುಟ್ಟ ಹೆಜ್ಜೆಯ ಓಡಾಟ, " ಅಮ್ಮ, ಆಫೀಸು ಹೋಗು" ಎಂಬ ಹಿತವಾದ ಬೈಗಳು, ಇವೆಲ್ಲ ಹೀಗೇ ಇರಲಿ ಅನಿಸುತ್ತಿರುವಾಗಲೇ, ಎರಡನೆಯ ಭೂಮಿ ಹುಣ್ಣಿಮೆ ಬರಬಾರದು ಅನಿಸುತ್ತಿದೆ. ಆ ಮುಗ್ದ ನಗು, ಆ ಸುಂದರ ತೊದಲು ಮಾತು, ಆ ಅಕ್ಕರೆಯ ಮಾತು, ಆ ಹಿತವಾದ ಸ್ಪರ್ಶ .... ಅನುಬಹವಿದವರಿಗಷ್ಟೇ ಗೊತ್ತು ಅದರ ಸುಖ. ಅಂಥಹ ಸುಂದರ ಪ್ರಪಂಚಕ್ಕೆ ಕರೆದೊಯ್ದ "ನನ್ನ ಪುಟ್ಟ ಕಂದ"ನಿಗೊಂದು ದೊಡ್ಡ ಧನ್ಯವಾದ, "ಚಿರಾಗ್! ಅಮ್ಮನ ಪ್ರೀತಿ ಬಂಗಾರಿ "

[ವಿ.ಸೂ. ಮಗ ಚಿರಾಗ್ ನಿಗೆ ಒಂದೂವರೆ ವರ್ಷ ಆದಾಗ ಬರೆದ ಒಂದು ಸಣ್ಣ ಲೇಖನ (೧೪-ಏಪ್ರಿಲ್-೨೦೧೦ ರಂದು) ]









2 comments:

  1. ಮಗು ದೊಡ್ಡವನಾಗುತ್ತಿದ್ದಂತೆ ಅವನ ಬಾಲ್ಯದ ಆಟಗಳನ್ನು ಎಷ್ಟು ಮಿಸ್ ಮಾಡಿಕೊಳ್ತಿವಲ್ಲ ....ಮಗು ಮೊದಲ ಹೆಜ್ಜೆ ಇಟ್ಟಾಗ ನಾವು ಪಡುವ ಸಂಬ್ರಮ..ತೊದಲು ಮಾತುಗಳನ್ನು ಕೇಳಿದಾಗ ಹೆಮ್ಮೆಯಿಂದ ಕಂದನನ್ನು ಮುದ್ದಾಡುವುದು.. ಇವೆಲ್ಲವೂ ಸವಿನೆನಪುಗಳಾಗಿ ಬಿಡುತ್ತವೆ. ಚೆನ್ನಾಗಿದೆ ನಿಮ್ಮ ಕಂದಮ್ಮನೊಡನೆ ನಿಮ್ಮ ಒಡನಾಟದ ಮೆಲುಕು.

    ReplyDelete
  2. ಧನ್ಯವಾದಗಳು..ನಿಜ ಚೇತನಾ ಅವರೆ. ಅವನ ಆಟಗಳನ್ನೆಲ್ಲ ನೋಡಿದಾಗ, ಅವನು ದೊಡ್ದವನಾಗುವುದೇ ಬೇಡ ಅನಿಸುತ್ತದೆ.

    ReplyDelete