ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

July 29, 2013

ಬಿಟ್ಟಿ ಸಲಹೆ -- 4

ಸಿಂಕ್ ತೊಳೆಯಲು :
 
ಬಳಸಿದ ನಿಂಬೆ ಹೋಳನ್ನು ಸಿಂಕ್ ತೊಳೆಯಲು ಬಳಸಿದರೆ ಸಿಂಕಿನಲ್ಲಿರುವ ಜಿಡ್ಡೂ  ಹೋಗುತ್ತದೆ  ಸಿಂಕ್ ಪರಿಮಳಯುಕ್ತವೂ ಆಗುತ್ತದೆ. 

July 23, 2013

ಕನ್ನಡಪ್ರಭ ಜಗುಲಿಯಲ್ಲಿ ಪ್ರಕಟವಾದ ಚಿಕ್ಕ ಬರಹಗಳು

ಕನ್ನಡಪ್ರಭ ಜಗುಲಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಬರೆದ ಎರಡು ಉತ್ತರಗಳು ಆಯ್ಕೆಯಾಗಿದ್ದವು (ತುಂಬಾ ದಿನಗಳ ನಂತರ ಇಲ್ಲಿ ಹಾಕುತ್ತಿದ್ದೇನೆ )
 


 

July 19, 2013

ಪುಟ್ಟನ ಪ್ರಶ್ನೆ -- 8


ಪುಟ್ಟನಿಗೆ ಸ್ನಾನ ಮಾಡ್ಸೋವಾಗ ಹೇಳ್ದೆ, " ಈ ಶನಿವಾರ ನಿನ್ನನ್ನ ಡೆಂಟಿಸ್ಟ್ ಹತ್ರ ಕರ್ಕೊಂಡು ಹೋಗ್ಬೆಕು, ಒಟ್ಟೆ ಆಗಿದ್ಯಂತೆ, ಸಿಮೆಂಟ್ ತುಂಬಿಸ್ಬೇಕು" ಅಂತ. ಅದಕ್ಕೆ ಪುಟ್ಟಾ ಕೇಳ್ದಾ , " ಅಮ್ಮಾ, ನಾನೇನು ರೋಡಾ ಸಿಮೆಂಟ್ ತುಂಬಿಸೋಕೆ?" !!&%^$%!!
[ಅಂದ ಹಾಗೆ ಪುಟ್ಟಾ ಸ್ವಲ್ಪ ದಿನದ ಹಿಂದೆ ಸಿರಸಿಯಲ್ಲಿ ಸಿಮೆಂಟ್ ರೋಡ್ ಮಾಡೋದು ನೋಡಿದ್ದ]

July 18, 2013

"ಭಾವ ಲೀಲೆ"




ಮೊನ್ನೆ ಮೊನ್ನೆಯವರೆಗೂ
"ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ"
ಎಂದು ಹಾಡುತ್ತಿದ್ದ ಹುಡುಗಿ,
ನಿನ್ನೆ ಅಕ್ಕನ ಮದುವೆಯಾದಾಗಿನಿಂದ
"ಬನ್ನಿ ಭಾವನವರೇ ಬನ್ನಿ ನನ್ನೆಡೆಗೆ"
ಎಂದು ಹಾಡಲಾರಂಭಿಸಿದ್ದಾಳಲ್ಲಾ!!

March 8, 2013

ಮರು ಹುಟ್ಟು






ಪುಟ್ಟಿಯ ಪ್ರಶ್ನೆ(?) ಶುರುವಾಗುವ ಮೊದಲು ಬ್ಲಾಗ್ ಗೆ ಮರಳಬೇಕೆಂದುಕೊಂಡು, ಈವತ್ತು ಆ ಮುಹೂರ್ತ ಬಂದಿದೆ. ಹೌದು, ನೀವು ಓದಿದ್ದು ನಿಜ. ಪುಟ್ಟನಿಗೆ ಪುಟ್ಟ ತಂಗಿ ಬಂದಿದ್ದಾಳೆ ಒಂದು ವರ್ಷದ (ಮಾರ್ಚ್ ೨೬) ಹಿಂದೆ :) ಅವಳ ಆಟ,ನಗು ಮತ್ತು ಪುಟ್ಟನ ಕೀಟಲೆಗಳಲ್ಲಿ ದಿನಗಳು ಕಳೆದಿದ್ದೆ ಗೊತ್ತಾಗುತ್ತಿಲ್ಲ. ಇನ್ನು ಮುಂದೆ ಸ್ವಲ್ಪ ಸ್ವಲ್ಪವಾಗಿ ಎಲ್ಲರ ಬ್ಲಾಗ್ ಓದಲು ಹಾಗೂ ನನಗನಿಸಿದ್ದನ್ನು ಗೀಚಲು ಆರಂಭಿಸಬೇಕೆಂದುಕೊಂಡಿದ್ದೇನೆ, ಆದರೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಅನ್ನೋದು ದೊಡ್ಡ ಪ್ರಶ್ನೆ!!

ಅಮ್ಮನಿಗೊಂದು ಒಲವಿನ ಓಲೆ...

ಪ್ರೀತಿಯ ಅಮ್ಮನಿಗೆ,

"God couldn't be there everywhere, so he created mothers", " ಕುಪುತ್ರೋ ಜಾಯೇತ್, ಕ್ವಚಿದಪಿ ಕುಮಾತಾ ನ ಭವತಿ " 

ಇವೆಲ್ಲಾಎಷ್ಟು ನಿಜ ಅಲ್ವಾ ಅಮ್ಮಾ? ಪ್ರತಿಯೊಬ್ಬರ ಬದುಕಲ್ಲಿ ಬರುವ ಮೊದಲ ಹೆಣ್ಣು ಅಮ್ಮ. ಅಂತೆಯೇ, ನನ್ನ ಬದುಕಲ್ಲೂ ಮೊದಲು ನೆಲೆನಿಂತ ಆದರ್ಶ ಹೆಣ್ಣು ನೀನು, ನನ್ನ ಹೆತ್ತಮ್ಮ. ಸಂಯಮದ ಸಾಕಾರಮೂರ್ತಿ, ಮೊಗೆದಷ್ಟು ಸಿಗುವ ಪ್ರೀತಿಯ ಆಗರ, ಹಿಮಾಲಯದಷ್ಟು ಶಾಂತ ಸ್ವರೂಪಿ, ನೂರೆಂಟು ನೋವುಗಳಿದ್ದರು ಒಡಲಲ್ಲಿ ಅಡಗಿಸಿ ನಗುವ ಸುಹಾಸಿನಿ. ಅಷ್ಟೇ ಏಕೆ, ನಮಗೆ ಚಿಕ್ಕ ನೋವಾದರೂ, ನಿನ್ನ ಒಡಲೇ ಹೊತ್ತಿ ಉರಿದಂತೆ ಸಂಕಟಪಡುವ ಮಮತಾಮಯಿ,ನೀನು ಖಾಲಿ ಹೊಟ್ಟೆಯಲ್ಲಿದ್ದರೂ, ನಾವು ಮಕ್ಕಳು ಹೊಟ್ಟೆ ತುಂಬಾ ತಿಂದು ತೇಗಲಿ ಎಂದು ಬಯಸುವ ಅನ್ನಪೂರ್ಣೇಶ್ವರಿ,ನಾವು ಎಷ್ಟೇ ತಪ್ಪು ಮಾಡಿದರೂ, ಅವನ್ನೆಲ್ಲಾ ಸಹಿಸಿ, ಮನ್ನಿಸುವ ಕ್ಷಮಯಾಧರಿತ್ರಿ, ಕಾಸಿಗೆ ಕಾಸು ಕೂಡಿಸಿ ನಮ್ಮನ್ನು ಓದಿಸಿ,ವಿದ್ಯಾವಂತರನ್ನಾಗಿ ಮಾಡಿದ ಸರಸ್ವತಿ. ಅಮ್ಮಾ,ನಿನ್ನ ಬಗ್ಗೆ ಎಷ್ಟು ಹೇಳಿದರೂ, ಬರೆದರೂ ಅದು ಕಡಿಮೆಯೆ.

ಒಳ್ಳೆಯ ಸ್ನೇಹಿತೆ, ಮಾರ್ಗದರ್ಶಕಿ, ಗುರು,ಸಹೋದರಿ ಎಲ್ಲಾ ಆದ ನಿನಗೆ ನನ್ನ ಅನಂತ ನಮನಗಳು. ನಿನ್ನ ಮೇಲಿನ ಗೌರವ, ಪ್ರೀತಿ ಇನ್ನೂ ಹೆಚ್ಚುವಂತೆ ಮಾಡಿದ ನಿನ್ನ ಮೊಮ್ಮಕ್ಕಳಿಗೆ ನನ್ನ ಧನ್ಯವಾದಗಳು. ಮಣಿಕಾಂತ್ ಸರ್ ಹೇಳಿದಂತೆ, "ಅಪ್ಪ ಅಂದ್ರೆ  ಆಕಾಶ", ಆದರೆ "ಅಮ್ಮಾ ನೀನೆಂದ್ರೆ  ನಗೆ ಮೂರು ಲೋಕ". ನನ್ನೆಲ್ಲಾ ಜನುಮದಲ್ಲೂ ನೀನೇ ನನ್ನ ಅಮ್ಮನಾಗಬೇಕು ಎಂಬುದೇ ನನ್ನ ಆಸೆ. ಏನಂತಿಯಾ?

ಕೊನೆಯಲ್ಲಿ ಒಂದು ಮಾತು. "ಅಮ್ಮಾ! ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ"
Happy Woman's Day!!                                                         

ಇಂತಿ ನಿನ್ನ ಪ್ರೀತಿಯ,
ಮಗಳು