ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

April 10, 2011

ಪುಟ್ಟನ ಪ್ರಶ್ನೆ -- 7


ಪುಟ್ಟನಿಗೆ ಹೇಳಿಕೊಡ್ತಾ ಇದ್ದೆ, ಯಾರಾದ್ರು ಮನೆಗೆ ಬಂದ್ರೆ "ಬನ್ನಿ, ಕೂತ್ಕೊಳ್ಳಿ" ಹೇಳಬೇಕೆಂದು. ಪುಟ್ಟ ಹೇಳ್ದಾ, "ಸರಿ ಅಮ್ಮಾ, ಹಾಗೇ ಕೇಳ್ತಿನಿ" "good  boy" ಅಂದೆ. ಪುಟ್ಟನಿಗೆ ಖುಷಿಯಾಯ್ತು. ಆಮೇಲೆ ಕೇಳ್ದಾ, " ಅಮ್ಮಾ, ಯಾರಾದ್ರು ಮನೆಯಿಂದಾ ಹೋದ್ರೆ??"

ನಂಬಿಕೆಯೆಂಬ ನಂಬಿಕೆ

"ನಂಬಿಕೆ ಬೆಳೆಸಿ,ಉಳಿಸಿ" ಇದೇನು? ಗಿಡ ಬೆಳೆಸಿ,ಉಳಿಸಿ ಅನ್ನೋ ಥರಾ ಹೇಳ್ತಿದಿನಿ ಅಂದುಕೊಂಡ್ರಾ?ನನ್ನ ಪ್ರಕಾರ ನಂಬಿಕೆ ಅನ್ನುವುದು ಒಂದು ಗಿಡವೇ ಸರಿ.ಅದನ್ನು ಬೆಳೆಸಿ,ಉಳಿಸುವುದು ತುಂಬ ಕಷ್ಟದ ಹಾಗೂ ಒಳ್ಳೆಯ ಕೆಲಸ.

ಈ ನಂಬಿಕೆ ಅನ್ನುವುದು ಯಾವುದೇ ಸಂಬಂಧದ ಅಡಿಪಾಯ.ಹೇಗೆ ಅಡಿಪಾಯ ಗಟ್ಟಿಯಿಲ್ಲದಿದ್ದರೆ,ಮನೆ ಮುರಿದುಬೀಳುತ್ತದೆಯೋ,ಹಾಗೆ ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧವೂ ಉಳಿಯುವುದಿಲ್ಲ.ಅದು ಹೆತ್ತವರ-ಮಕ್ಕಳ ಸಂಬಂಧವಿರಬಹುದು,ಅಕ್ಕ-ತಂಗಿಯರ ಸಂಬಂಧವಿರಬಹುದು,ಗುರು-ಶಿಷ್ಯರ ಸಂಬಂಧವಿರಬಹುದು,ಗಂಡ-ಹೆಂಡತಿಯ ಸಂಬಂಧವಿರಬಹುದು.

"ನಂಬಿ ಕೆಟ್ಟವರಿಲ್ಲವೋ" ಅಂತ ದಾಸವಾಣಿಯೇ ಇದೆ.ಹಾಗಂತ ಎಲ್ಲವನ್ನೂ,ಎಲ್ಲರನ್ನೂ ನಂಬಬೇಕೆಂದಿಲ್ಲ,ಅದಕ್ಕೂ ಒಂದು ಮಿತಿಯಿರಬೇಕು.ನಾವು ಯಾರನ್ನು,ಯಾವ ಸಮಯದಲ್ಲಿ,ಎಷ್ಟು ನಂಬಬೇಕೆಂಬುದು ನಿರ್ಧರಿಸುವುದು ಸ್ವಲ್ಪ ಕಷ್ಟ ಹಾಗೂ ಅದು ಅವರವರಿಗೆ ಬಿಟ್ಟದ್ದು.

ನಂಬಿಕೆಯನ್ನು ಬೆಳೆಸುವುದು ಹಾಗೂ ಉಳಿಸುವುದು ನಮ್ಮ ಕೈಯಲ್ಲೇ ಇದೆ.ಇಲ್ಲೊಂದು ಚಿಕ್ಕ ಉದಾಹರಣೆಯನ್ನು ಕೊಡುತ್ತೇನೆ.ನನ್ನ ಮಗ ಆಟ ಆಡೋಣ ಬಾ ಎಂದು ಕರೆಯುತ್ತಾನೆ.ಆಗ ಊಟದ ಸಮಯವಾಗಿರುತ್ತದೆ ಎಂದುಕೊಳ್ಳಿ.ಆಗ ನಾನು ಅವನಿಗೆ,"ನೀನು ಊಟ ಮಾಡಿದರೆ ಆಡಲು ಬರುತ್ತೇನೆ" ಎನ್ನುತ್ತೇನೆ.ಅವನು ಊಟಕ್ಕೆ ಬರುತ್ತಾನೆ ಮತ್ತು ಊಟ ಮಾಡಿ ಮುಗಿಸುತ್ತಾನೆ.ನಂತರ ನಾನು ಅವನ ಸಂಗಡ ಆಡುತ್ತೇನೆ ಹೇಳಿದಂತೆ. ಅದೇ ರೀತಿ,ನಾನು ಅವನಿಗೆ "ಮಲಗುವ ಹೊತ್ತಾಯಿತು,ಈಗ ಮಲಗು,ಅಮೇಲೆ ಎದ್ದು ಆಡುವಿಯಂತೆ"ಅಂದರೆ,ಅವನೂ ನನಗೆ ಹೇಳುತ್ತಾನೆ," ಒಂದು ಸಲ ಆಡಿ, ಮಲಗುತ್ತೇನೆ".ಸರಿ ಎಂದಾಗ,ಒಂದು ಸಲ ಆಡಿ,ಮಲಗುತ್ತಾನೆ.

ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ,ಪರಸ್ಪರ ನಂಬಿಕೆ.ಊಟ ಮಾಡಿದರೆ,ಅಮ್ಮ ಆಡಲು ಬರುತ್ತಾಳೆ ಎಂಬ ನಂಬಿಕೆ ಮಗನಿಗೆ,ಮಗ ಆಡಿ ಮಲಗುತ್ತಾನೆ ಎಂಬ ನಂಬಿಕೆ ಅಮ್ಮನಿಗೆ.ಇಲ್ಲಿರುವ ಇನ್ನೊಂದು ಸಂಗತಿ ಏನೆಂದರೆ,ಇಬ್ಬರೂ ಒಬ್ಬರಿಗೊಬ್ಬರಲ್ಲಿ ನಂಬಿಕೆ ಬೆಳೆಸಿಕೊಂಡಿರುವುದು ಹಾಗೂ ಉಳಿಸಿಕೊಂಡಿರುವುದು.

ಮೇಲಿನ ಸನ್ನಿವೇಶದಂತೆ,ನಾವು ದಿನನಿತ್ಯ ಅನೇಕ ಸನ್ನಿವೇಶಗಳನ್ನು ಎದುರಿಸುತ್ತಿರುತ್ತೇವೆ.ಎಂತಹ ಸಂದರ್ಭದಲ್ಲೂ, ನಂಬಿಕೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.ಆದ್ದರಿಂದ ನಾವೆಲ್ಲರೂ ನಂಬಿಕೆಯನ್ನು ಬೆಳೆಸುವುದರಲ್ಲಿ ಹಾಗೂ ಉಳಿಸುವುದರಲ್ಲಿ ನಂಬಿಕೆಯನ್ನು ಇಡೋಣ,ಆಗಬಹುದಾ??

April 4, 2011

ಹನಿಗವನ

ನವ - ವಸಂತ
ಜೊತೆಯಲಿ ಕಳೆದವು
ವಸಂತಗಳೈದು,
ಆದರೂ ಬರಲಿರುವ
ವಸಂತ ಇನ್ನೂ ಹೊಸದರಂತೆ!!

ಪ್ರತಿಯೊಂದು ಹೆಜ್ಜೆಗೆ
ಗೆಜ್ಜೆಯ ದನಿಯಾಗಿ,
ಹೊರಟಿದೆ ಜೀವನ ರಥ
ಸುಗಮ ಪಥದಲ್ಲಿ!!

ಒಂದಾಗಿ ಕಂಡಂತ
ಸಾವಿರ ಕನಸುಗಳು,
ನನಸಾಗಿವೆ ಕೆಲವು
ಇನ್ನೂ ಉಳಿದಿವೆ ಹಲವು!!

ಮುಂದಡಿ ಇಟ್ಟಂತೆ
ನೆಲೆಸಲಿ ಸುಖ-ಶಾಂತಿ,
ಬೆಳಗಲಿ ಜೀವನ ಜ್ಯೋತಿ
ಆ ದೇವನ ಕ್ರಪೆಯಿಂದ,ಕಟಾಕ್ಷದಿಂದ!!

[ ಏಪ್ರಿಲ್ ೩, ೨೦೧೧ ಕ್ಕೆ ಜೊತೆಯಾಗಿ ೫ ವಸಂತಗಳನ್ನು ಪೂರೈಸಿದ ಸಮಯದಲ್ಲಿ ಗೀಚಿದ್ದು ]