ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

January 19, 2011

ನಾನು ಪೈಲಾ ಬಿದ್ದಿದ್ದು!!

ಆವತ್ತು ಮನೆಗೆ ಯಾರೋ ಅತಿಥಿಗಳು ಬರುವವರಿದ್ದರು ಅಂತಾ ಆಫೀಸಿನಿಂದ ದಿನದಕ್ಕಿಂತ ೧೦ ನಿಮಿಷ ಮೊದಲೇ ಹೊರಟಿದ್ದೆ. ತಲೆಯ ತುಂಬಾ, ರಾತ್ರಿ ಊಟಕ್ಕೆ ಏನೇನು ಮಾಡಬೇಕೆಂಬ ಯೋಚನೆ ಕೊರೆಯುತ್ತಿತ್ತು.

ಎಂದಿನಂತೆ, ನಾನು ಗಾಡಿ ನಿಲ್ಲಿಸುವ ಜಾಗದಲ್ಲಿ ಬರೆದಿದ್ದ "Please lock your 'helemate'" ಅನ್ನು ಓದಿ, ಹೆಲ್ಮೆಟ್ ಹಾಕಿಕೊಂಡು, ಇನ್ನೇನು ಗಾಡಿ ಸ್ಟಾರ್ಟ್ ಮಾಡಬೇಕು, ದೃಷ್ಟಿ ಪೆಟ್ರೋಲ್ ಮೀಟರ್ ನತ್ತ ಹೋಯಿತು, ನೋಡುತ್ತೇನೆ ಅದರ ಕಡ್ಡಿ ತೆಪ್ಪಗೆ "E" ಬಂದು ಕುಳಿತುಬಿಟ್ಟಿದೆ.  ಕ್ಷಣ ದಿಗಿಲಾಯಿತು, "ಅಯ್ಯೋ ದೇವರೇ!ಈಗೇನು ಮಾಡುವುದು?" "E ಅಂದ್ರೆ, ಪೂರ್ತಿ ಖಾಲೀನಾ?" " ಈ ಸ್ಕೂಟಿಯಲ್ಲಿ ಬೇರೆ reserve concept ಇದೆಯೋ ಗೊತ್ತಿಲ್ಲಾ, ಸ್ವಲ್ಪನಾದ್ರೂ ಓಡುತ್ತಾ? ಕೊನೇಪಕ್ಷ ಕ್ಯಾಂಪಸ್ನಿಂದ ಹೊರಗೆ ಇರುವ ಪೆಟ್ರೋಲ್ ಬಂಕ್ ವರೆಗಾದ್ರೂ ಹೋಗುತ್ತಾ?" "ಅಲ್ಲಿವರೆಗಾದ್ರೂ ಹೋಗಿದ್ರೆ, ಪೆಟ್ರೋಲ್ ಹಾಕಿಸ್ಕೊಂಡು ಹಾಗೆ ಹೋಗಬಹುದಿತ್ತು !!"
 "ಇಲ್ಲಾ ಅಂದ್ರೆ ಪೆಟ್ರೋಲ್ ಬಂಕ್ ವರೆಗೂ ನಡೆದುಕೊಂಡು ಹೋಗಿ ಬಾಟಲ್ನಲ್ಲಿ ತುಂಬಿಸಿಕೊಂಡು ಬಂದ್ರೆ!?" " ಛೆ! ಈಗ ಬಾಟಲ್ನಲ್ಲಿ ಪೆಟ್ರೋಲ್/ಡಿಸೇಲ್ ಕೊಡೋಲ್ಲ ಅಂತಾ ಕೇಳಿದೀನಿ " ಹೀಗೆ ೫ ನಿಮಿಷದಲ್ಲಿ ತಲೆಯಲ್ಲಿ ಹತ್ತೆಂಟು ಯೋಚನೆಗಳು.

ಏನಾಗ್ಲಿ, ಯಾವ್ದಕ್ಕೂ ಒಂದ್ಸಲ ರಮೇಶ್ ಗೆ ಕೇಳೋಣ ಅಂದ್ಕೊಂಡು ಫೋನ್ ಮಾಡಿದ್ರೆ, ಆಸಾಮಿ ಫೋನ್ ಎತ್ತತಾನೆ ಇಲ್ಲ. ಇನ್ನೇನು, ಅವರು ಅದನ್ನೇ ಹೇಳ್ತಾರೆ " ಪೆಟ್ರೋಲ್ ಬಂಕಿನವರೆಗೂ ಹೋಗುತ್ತಾ ನೋಡು" ಅಂತಾ ಅಂದ್ಕೊಂಡು ಇನ್ನೊಂದು ಸಲ ಟ್ರೈ ಮಾಡೋಣ ಅಂತಾ ಫೋನ್ ಎತ್ಕೊಂಡೆ.

"ಹಲೋ"
"ಹಲೋ, ರ್ರೀ ಗಾಡಿಯಲ್ಲಿ ಪೆಟ್ರೋಲ್ ಫುಲ್ ಖಾಲಿ ಆಗೋಜು"
"ಹೆಂಗೊತ್ತಾತು"
"ಅದ್ರ ಕಡ್ಡಿ E ಗೆ  ಬಂದೊಜು!!"
"ಹ್ಮ!! ಒಂದ್ ಬಾರಿ ಗಾಡಿ ಸ್ಟಾರ್ಟ್ ಮಾಡು"
"ಅದರಿಂದ ಎಂತಾ ಆಗ್ತು, ಪೆಟ್ರೋಲೇ ಇಲ್ಲೆ"
"ನೀ ಸ್ಟಾರ್ಟ್ ಮಾಡಿ ಫೋನ್ ಮಾಡು "
"ಸರಿ"
ಫೋನ್ ಕಟ್ ಮಾಡಿ, ಗಾಡಿ ಸ್ಟಾರ್ಟ್ ಮಾಡ್ದೆ, ಗಾಡಿ ಏನೋ ಸ್ಟಾರ್ಟ್ ಆಯ್ತು. ಪುನಃ ಫೋನ್ ಮಾಡ್ತಾ ನೋಡ್ತಿನಿ, ಕಡ್ಡಿ ನಿಧಾನಕ್ಕೆ ಮೇಲೆ ಏರಿ "F " ಹತ್ರ ನಿಲ್ಬೇಕೆ? ಇದೇನಾಶ್ಚರ್ಯ!!
"ರ್ರೀ, ಈಗ ಕಡ್ಡಿ "F " ಹತ್ರ ಬೈಂದು"
"ಹಿ ಹಿ ಹಿ "
"ನಗದೆಂತಕ್ಕೆ?"
"ಅಯ್ಯೋ ಮಳ್ಳು, ಗಾಡಿ ಬಂದ್ ಇದ್ದಾಗ E ಹತ್ರಾನೆ ಇರ್ತು,ಸ್ಟಾರ್ಟ್ ಮಾಡಿದ್ಮೇಲೆ ಸರಿ ತೋರಸ್ತು. ಈಗ ನಿಧಾನಕ್ಕೆ ಹೊರಟು ಬಾ ನೀನು ಮನೆಗೆ "
ನಾನು ಪೆಚ್ಚು ಮೋರೆ ಹಾಕಿಕೊಂಡು "ಹೌದಾ?" ಅನ್ನುವಷ್ಟರಲ್ಲಿ ಅವರು ಫೋನ್ ಇಟ್ಟಾಗಿತ್ತು.

ಒಟ್ಟಿನಲ್ಲಿ, ಒಂದು ಹೊಸ ಅನುಭವದ ಜೊತೆಗೆ, ನಗುನೂ ಬಂತು.

ಈಗ ನಾನು ಎಲ್ಲಿಗಾದರೂ ಹೊರಟರೆ, ರಮೇಶ್ ಕೇಳ್ತಾರೆ " ಪೆಟ್ರೋಲ್ ಇದ್ದ ನೋಡ್ಕಂದ್ಯ? " ನಾನು ಒಮ್ಮೆ ಅವರನ್ನು ಗುರಾಯಿಸಿ, ಹೊರಡುತ್ತೇನೆ :)

[ವಿ. ಸೂ: ಪೈಲಾ ಬಿದ್ದಿದ್ದು ಅಂದ್ರೆ ಫೂಲ್ ಆಗಿದ್ದು ಅಂತಾ :) ]

January 14, 2011

ಪುಟ್ಟನ ಪ್ರಶ್ನೆ -- 5


ಬೆಳಿಗ್ಗೆ ದೇವರಮನೆ ಮುಂದೆ ರಂಗೋಲಿ ಹಾಕಿದ್ದೆ. ಸಾಯಂಕಾಲ ದೀಪ ಹಚ್ಚಲು ಹೋದಾಗ ಪುಟ್ಟನೂ ಬಂದಾ (ಸಾಮಾನ್ಯವಾಗಿ ದಿನಾಲೂ ಅವನನ್ನು ಕರೆದುಕೊಂಡೇ ದೀಪ ಹಚ್ಚುತ್ತೇನೆ). ಎಂದಿನಂತೆ ಈವತ್ತೂ ರಂಗೋಲಿ ನೋಡಿ ಖುಷಿ ಆಯ್ತು ಅವನಿಗೆ. ತಕ್ಷಣವೇ ತೂರಿಬಂತು ಒಂದು ಪ್ರಶ್ನೆ, "ಅಮ್ಮಾ, 'q' ' q' ಅಂತಾ ಬರ್ದಿದ್ದೀಯಾ ??" ಅವನಿಗೆ ನನ್ನ ರಂಗೋಲಿ ಆ ಥರಾ ಕಂಡಿದ್ದರಲ್ಲಿ ಆಶ್ಚರ್ಯ ಇಲ್ಲಾ ಅಂತಾ ನನಗೂ ಆಮೇಲೆ ಅನಿಸಿತು, ನೀವೆನಂತಿರಾ?

January 13, 2011

ಹನಿಗವನ

ನಾನು ಪಿ.ಯು.ಸಿ ಓದಿದ್ದು ಉಜಿರೆಯ SDM ಕಾಲೇಜಿನಲ್ಲಿ. ಯಲ್ಲಾಪುರದಿಂದ ಸುಮಾರು ೧೦ ಘಂಟೆಗಳ ಪ್ರಯಾಣ (KSRTC ಬಸ್ಸಿನಲ್ಲಿ ಎನ್ನುವುದು ಬೇರೆ ವಿಷಯ) ಆ ಸಮಯದಲ್ಲಿ ಬಸ್ಸಿನಲ್ಲಿ ಕುಳಿತು ಬರೆದ ಒಂದು ಚುಟುಕು.

ವಿಪರ್ಯಾಸ

" ಈ ಬಸ್ಸಿನ
ಪ್ರಯಾಣವೇ ಹೀಗೆ,
ಮುಗಿಯುವುದೇ ಇಲ್ಲ,
ಎಂದು ಗೊಣಗುತ್ತಿದ್ದವನ
ಬದುಕಿನ ಪ್ರಯಾಣವನ್ನೇ
ವಿಧಿ ಆಕ್ಸಿಡೆಂಟಿನ
ರೂಪದಲ್ಲಿ ಮುಗಿಸಬೇಕೇ ?!!"

January 12, 2011

ಬಿಟ್ಟಿ ಸಲಹೆ -- 2

ಹಿಮ್ಮಡಿ ಒಡೆಯುವಿಕೆಗೆ:

ಕಾಲಿನ ಹಿಮ್ಮಡಿ ಒಡೆದು ತೊಂದರೆಯಾಗುತ್ತಿದ್ದರೆ, ಹೂಬಿಸಿ ನೀರಿನಲ್ಲಿ ಕಾಲು ಇಳಿಬಿಟ್ಟು, ಸ್ವಲ್ಪ ಸಮಯದ ನಂತರ ಸ್ವಚ್ಛವಾಗಿ ತೊಳೆಯಿರಿ. ನಂತರ ಲೋಳೆಸರ (ಆಲೋವೆರ) ಎಲೆಯನ್ನು ಮಧ್ಯದಲ್ಲಿ ಕತ್ತರಿಸಿ, ಲೋಳೆಯನ್ನು ಒಡೆದ ಜಾಗಕ್ಕೆ ಹಚ್ಚಿ.೩-೪ ವಾರ ಹೀಗೆ  ಮಾಡಿದಲ್ಲಿ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತ ಬರುತ್ತದೆ.

January 7, 2011

ಹೀಗೊಂದು ಮೆಲುಕು


"ಬರುತಿದೆ ಬರುತಿದೆ ಸಂಕ್ರಾಂತಿ 
ತರಲಿ ಎಲ್ಲರ ಬದುಕಲ್ಲೂ ಹೊಸ ಕ್ರಾಂತಿ !!"


ಚಿಕ್ಕವರಿರುವಾಗ, ಸಂಕ್ರಾಂತಿಗೆ ಒಂದು ವಾರವಿರುವಾಗಲೇ ನಮ್ಮ ತಯಾರಿ ಶುರು ಆಗುತ್ತಿತ್ತು. ಒಳ್ಳೆ ಬಣ್ಣದ ಡಬ್ಬಿ ತರುವುದರಿಂದ ಹಿಡಿದು, ಅದಕ್ಕೆ ಸಿಂಗರಿಸುವುದು, ಸಂಕ್ರಾಂತಿ ಕಾಳುಗಳನ್ನು ತರುವುದು, ಅದಕ್ಕೆ ಎಳ್ಳು ಹುರಿದು ಬೆರೆಸುವುದು, ಹೊಸ ಬಟ್ಟೆ ಕೊಳ್ಳುವುದು, ಕಬ್ಬು ಕಡಿದು ತರುವುದು ...ಹೀಗೆ ಹತ್ತಾರು ಕೆಲಸಗಳು.
ಸಂಕ್ರಾಂತಿಯ ಬೆಳಗು ಆಗುವುದಕ್ಕೆ ಕಾಯುತ್ತಿದ್ದೆವು. ಎದ್ದು, ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಸಂಕ್ರಾಂತಿ ಕಾಳುಗಳನ್ನು ತಂದಿಟ್ಟ ಚಂದದ ಡಬ್ಬಿಗೆ ತುಂಬಿ ಶಾಲೆಗೆ ಹೊರಡುತ್ತಿದ್ದೆವು. ಅಲ್ಲಿ ಎಲ್ಲರಿಗೂ "ಎಳ್ಳು ಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡೋಣ " ಎಂದು ಹೇಳುತ್ತಾ ಸಂಕ್ರಾಂತಿ ಕಾಳುಗಳನ್ನು ಕೊಡುವಾಗಿನ ಮಜವೇ ಬೇರೆ. ಕೊಟ್ಟ ಕಾಳುಗಳಲ್ಲಿ ಎರಡನ್ನಾದರೂ ವಾಪಾಸ್ ಕೊಡಬೇಕೆಂಬುದು ಒಂದು ಪದ್ಧತಿ ( ಈ ಪದ್ದತಿಯಿಂದಾಗಿ ತೆಗೆದುಕೊಂಡು ಹೋದ ಡಬ್ಬಿ ತುಂಬಿಯೇ ಇರುತ್ತಿತ್ತು ). ಇಡೀ ದಿನ ಬರೀ ಸಂಕ್ರಾಂತಿ ಕಾಳುಗಳನ್ನೇ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದೆವು. ಮನೆಗೆ ಬಂದರೂ ಅದೇ ಧ್ಯಾನ. ಇಷ್ಟಾದ ಮೇಲೆ, ಸಂಜೆ ಕಬ್ಬು ತಿನ್ನುವ ಕೆಲಸ. ಆ ವಾರವೆಲ್ಲಾ ಮನ-ಮನೆ ಎಲ್ಲಾ ಸಂಕ್ರಾಂತಿಮಯ. ಸಂಕ್ರಾಂತಿ ಹಬ್ಬ ಮುಗಿದಂತೆ, ಯಾಕೆ ವರ್ಷಕ್ಕೆ ಒಂದೇ ಸಂಕ್ರಾಂತಿ ಎನ್ನುವ ಬೇಸರ. ಏನೇ ಹೇಳಿದ್ರೂ, ಆ ದಿನಗಳೇ ಸೊಗಸು.

ಪ್ರತಿ ವರ್ಷದಂತೆ ಈ ವರ್ಷವೂ ಬರುತಿದೆ ಸಂಕ್ರಾಂತಿ. ಆದರೆ ಮೊದಲಿನ ಆ ಉತ್ಸಾಹ ಈಗ ಇಲ್ಲ :( ಆದರೂ, "ಕಾಲವನ್ನು ತಡೆಯೋರು ಯಾರೂ ಇಲ್ಲಾ ..." ಎಂದು ಕೊಳ್ಳುತ್ತಾ, "ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು"

ಚಿತ್ರ ಕೃಪೆ: ಅಂತರ್ಜಾಲ