ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 31, 2010

ಪುಟ್ಟನ ಪ್ರಶ್ನೆ -- 4

ಪುಟ್ಟನಿಗೆ ಹೇಳಿಕೊಡ್ತಾ ಇದ್ದೆ, " ಪುಟ್ಟಾ, ಯಾರಾದ್ರು ನಿನ್ನ ಕೂಗಿದ್ರೆ ಓ ಅನ್ಬೇಕು" ಅಂಥಾ, ಪುಟ್ಟಾ ಕೇಳ್ದಾ, " ಅಮ್ಮಾ, ನಾ ಪೀ ಹೇಳಲಾ?". ಗೊತ್ತಾಯ್ತಲ್ವ ನಿಮಗೆ, ಪುಟ್ಟಾ ಏನಕ್ಕೆ ಹಾಗೆ ಕೇಳ್ದಾ ಅಂಥಾ?? 

ನನ್ನಿನಿಯ ನೀನು...!!

[ಯಾವಾಗಲೂ ಅಷ್ಟೇ, ಕವನ ಬರೆಯಬೇಕೆಂದುಕೊಂಡಾಗ ಮೊದಲು ನೆನಪಾಗುವುದು, ರಮೇಶ್, ಚಿರಾಗ್ ಇಲ್ಲಾ ಅಪ್ಪ-ಅಮ್ಮ. ಈಗಲೂ ಸಹ ಗೀಚಿರುವುದು ರಮೇಶ್ ಮೇಲೆ :)]


ಕೆನ್ನೆ ಕೆಂಪೇರಿತ್ತು,
ಸಂಜೆ ರಂಗೇರಿತ್ತು,
ನೀನಿತ್ತ ಹೂ ಮುತ್ತು,
ತರಿಸಿತ್ತು ಮತ್ತು!!


ಆ ನಿನ್ನ ಪ್ರೀತಿ,
ಆದರದ ರೀತಿ,
ಒಲುಮೆಯಾ ನೀತಿ,
ಬಾಳಿನಾ ಪ್ರಣತಿ!!


ಮುಗ್ಧವಾದ ಮನಸು,
ಮಗುವಿನಂತೆ ಎಳಸು,
ನನ್ನೊಳಗಿನ ಕನಸು
ನೀನಾದೆ ನನಸು!!


ಕಣ ಕಣದಲು ನೀನು,
ಜೀವನವೇ ಸಿಹಿಜೇನು ,
ನಾ ಭೂಮಿ ನಿ ಬಾನು,
ನಿನ್ನಗಲಿ ಇರುವೆನೇನು?

December 30, 2010

ಹೆಸರು ಹಿಡಿದು ಕರೆಯಿರಿ – Call by name !!


ಆವಾಗ ತಾನೇ ಕಾಲೇಜ್ [ಬಿ.ಇ.] ಮುಗಿಸಿ, campus selection ಅಲ್ಲಿ ಒಳ್ಳೆಯ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಸೇರಿಕೊಂಡಾಗ ಸ್ವರ್ಗಕ್ಕಿನ್ನು ಮೂರೇ ಗೇಣು. ಎಲ್ಲಾ ಹೊಸತು, ಆದರೂ ಕಲಿಯುವ ಹುಮ್ಮಸ್ಸು. ಏನು ಹೇಳಿದರು ಮಾಡಲು ಸೈ. ಇನ್ನೂ ಕಾಲೇಜ್ mentality ಯಿಂದ ಹೊರ ಬಂದಿರಲಿಲ್ಲ. ಅವೇ ಕುಚೇಷ್ಟೆಗಳು, ಹರಟೆಗಳು, ಪಾರ್ಟಿಗಳು etc etc 

ಕಾಲೇಜ್ನಲ್ಲಿ ಇದ್ದಾಗ, ಸೀನಿಯರ್ ಹುಡುಗರನ್ನು ಸರ್ ಎಂದು [ಅಣ್ಣ ಎಂದು ಕರೆದರೆ ಯಾರಿಗೂ ಅಷ್ಟು ಇಷ್ಟವಾಗುತ್ತಿರಲಿಲ್ಲ :)], ಹುಡುಗಿಯರನ್ನು ದೀದಿ [ಅಕ್ಕ] ಎಂದೂ ಕರೆದು ರೂಢಿ. ಹಾಗೆಯೇ ಇಲ್ಲೂ ಅದನ್ನುಮುಂದುವರೆಸಿದ್ದೆವು. ಹಾಗೆಯೇ ಒಂದು ದಿನ ಕಾರಿಡಾರ್ ನಲ್ಲಿ ಹೋಗುತ್ತಿದ್ದಾಗ, ಸೀನಿಯರ್ ವ್ಯಕ್ತಿಯೊಬ್ಬರು ಎದುರು ಬಂದ್ರು. ನಾನು ಮತ್ತು ಜೊತೆಯಲ್ಲಿದ್ದ collegue ಇಬ್ಬರು, "ಗುಡ್ ಮಾರ್ನಿಂಗ್" ಸರ್" ಹೇಳಿದೆವು, ಅವರು ನಕ್ಕು " ಕಾಲ್ ಮಿ ಬೈ ನೇಮ್" ಅಂದ್ರು, ಇಬ್ಬರು ಒಟ್ಟಿಗೆ " ಎಸ್ ಸರ್ " ಅಂದಾಗ ಅವರು ಮತ್ತೊಮ್ಮೆ ನಕ್ಕು, "ಕಾಲ್ ಮಿ ಅನೂಪ್" [ಪ್ರಾಸ್ತಾವಿಕ ಹೆಸರು] ಅಂದ್ರು, ಪುನಃ ನಾವಿಬ್ಬರು " ಓಕೆ ಸರ್ ". ಅವರು ಏನೂ ಹೇಳದೆ ಹೊರಟು ಹೋದರು. ಆಗ ಇಬ್ಬರು ಮುಖ ಮುಖ ನೋಡಿಕೊಂಡೆವು, ಏನಿಲ್ಲವೆಂದರೂ ೮-೧೦ ವರ್ಷ ದೊಡ್ಡವರನ್ನು ಹೆಸರು ಹಿಡಿದು ಕರೆಯುವುದು ಹೇಗೆಂದು!! ಆಮೇಲೆ ಆ ವ್ಯಕ್ತಿ ಸಿಕ್ಕಿದಾಗೆಲ್ಲ ವಿಶ್ ಮಾಡುತ್ತಿದ್ದೆವು " ಸರ್" ಅನ್ನು ಮೆಲ್ಲಗೆ ಹೇಳಿಕೊಂಡು. ನಿಧಾನವಾಗಿ, ಹೆಸರು ಹಿಡಿದು ಕರೆಯುವುದು ಅಭ್ಯಾಸವಾಗತೊಡಗಿತ್ತು. ಮೊದ-ಮೊದಲು ಸ್ವಲ್ಪ ಕಸಿವಿಸಿ ಆದರೂ, ಕ್ರಮೇಣ ಇ ಮೇಲ್ ಮಾಡುವಾಗ, ಕರೆಯುವಾಗ ಅದೇ ಸುಲಭವೆಂದು ಅನಿಸತೊಡಗಿತ್ತು. ಏಕೆಂದರೆ, ಎದುರಿಗೆ ಇರುವವರು ನಮಗಿಂತ ದೊಡ್ಡವರೋ, ಚಿಕ್ಕವರೋ ತಿಳಿಯುತ್ತಿರಲಿಲ್ಲ. ಅದನ್ನು ತಿಳಿಯುವ 
ಗೋಜಿಗೂ ಹೋಗುತ್ತಿರಲಿಲ್ಲ.

ಇವತ್ತು "ಕಾಲ್ ಬೈ ನೇಮ್" ಅನ್ನುವುದು ಕೆಲಸದ ಒಂದು ಅವಿಭಾಜ್ಯ ಅಂಗ ಆಗಿದೆ.ಆದರೆ, ಎಲ್ಲೋ ಒಂದು ಕಡೆ, ಈ "ಕಾಲ್ ಬೈ ನೇಮ್" ಇಂದ ಸಂಬಂಧಗಳ ಸೊಗಡು ಕಡಿಮೆಯಾಗುತ್ತಿದೆಯಾ ಅನಿಸುತ್ತಿದೆ, ನೀವೆನಂತಿರಾ?

December 27, 2010

ಪುಟ್ಟನ ಆಟಗಳು

ಇತ್ತೀಚೆಗೆ ನಮ್ಮ ಪುಟ್ಟನಿಗೆ ಕುಳಿತು ಆಡುವ ಆಟಗಳೆಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ನಿತ್ಯ ಹೊಸ ಆಟಕ್ಕಾಗಿ ನಮ್ಮ ಹುಡುಕಾಟ :)
ಇಲ್ಲಿವೆ ಅವನ ಆಟದ ಕೆಲವು ಚಿತ್ರಗಳು.  [ನಿಮಗೂ ಯಾವುವಾದರೂ  ಕುಳಿತು ಆಡುವ ಆಟಗಳು ಗೊತ್ತಿದ್ದಲ್ಲಿ ನನಗೆ ತಿಳಿಸಿ ದಯವಿಟ್ಟು.]



















December 22, 2010

ಪುಟ್ಟನ ಪ್ರಶ್ನೆ -- 3

ಪುಟ್ಟನ ಅಕ್ಕ (ದೊಡ್ಡಪ್ಪನ ಮಗಳು ) MBBS ಓದುತ್ತಿದ್ದಾಳೆ. ಅವಳು ಪುಟ್ಟನಿಗೆ ಹೇಳುತ್ತಿದ್ದಳು, " ಪುಟ್ಟಾ, ಕರಿ (ಕಪ್ಪು) ಚಾಕಿ (ಚಾಕಲೇಟ್) ತಿನ್ಬೇಡ, ಹಲ್ಲು ಕರಿ ಆಗುತ್ತೆ". ಪುಟ್ಟಾ ಕೇಳಿದ, "ಬಿಳಿ ಚಾಕಿ ತಿಂದ್ರೆ? "

ಬಿಟ್ಟಿ ಸಲಹೆ -- 1

[ ಹೌದು, ಹೆಸರೇ ಹೇಳುವಂತೆ ನನ್ನ ಕೆಲವು ಬಿಟ್ಟಿ ಸಲಹೆಗಳನ್ನು ಬರೆಯುತ್ತಿದ್ದೇನೆ. ಇಷ್ಟವಾದರೆ ನೀವೂ ಮಾಡಿ ನೋಡಿ.]

ಕೂದಲು ಉದುರುವಿಕೆಗೆ:

ತಲೆಕೂದಲು ತುಂಬಾ ಉದುರುತ್ತಿದೆಯಾದರೆ, 100 ml  ಬಾದಾಮಿ ಎಣ್ಣೆಗೆ, 100 ml  ಆಲಿವ್ ಎಣ್ಣೆ ಬೆರೆಸಿ, ಕೂದಲ ಬುಡಕ್ಕೆ ತಿಕ್ಕಿ ಮಸಾಜ್ ಮಾಡಿ, ಒಂದು ರಾತ್ರಿ ಬಿಟ್ಟು ಸ್ನಾನ ಮಾಡಿ. ಉದುರುವಿಕೆ ಕಡಿಮೆಯಾಗುತ್ತದೆ.

December 21, 2010

ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬರೆದ ಒಂದು ಪುಟ್ಟ ಚುಟುಕು. ಹಾ! ಅಂದ ಹಾಗೆ, "ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿಯವರ ಚುಟುಕುಗಳೆಂದರೆ ನನಗೆ ತುಂಬಾ ಇಷ್ಟ. ನನ್ನ ಚುಟುಕುಗಳಿಗೆ ಸ್ಪೂರ್ತಿ ಅವರು. (ಬರೆಯುವ ಪ್ರಯತ್ನಕ್ಕೆ).ಶಾಲಾ ದಿನಗಳಲ್ಲಿ ಬರೆಯುತ್ತಿದ್ದ ಪ್ರತಿಯೊಂದು ಕಥೆ, ಪ್ರಬಂಧ, ಭಾಷಣಗಳಲ್ಲಿ ಕಡಿಮೆ ಎಂದರು ೩-೪ ದೇಸಾಯಿಯವರ ಚುಟುಕುಗಳು ಇರುತ್ತಿದ್ದವು. 


ವಿಪರ್ಯಾಸ
" ಓ ಪ್ರಕೃತಿಮಾತೆ! 
ನಿನ್ನುಳಿವೆ ನನ್ನುಳಿವು
ಎಂದುಕೊಳ್ಳುವ ಮಾನವ,
ಓ ಪ್ರಕೃತಿಮಾತೆ!
ನಿನ್ನಳಿವೆ ನನ್ನಳಿವು
ಎಂದೇಕೆ ಅಂದುಕೊಳ್ಳಲಾರ?? "

OMG ..OMG.. Oh My God!! It's dream come true !!!

It has been nearly one month, I was learning to ride my Scooty. I was wondering whether I'll be able to ride it or not. But, believe me, I got inspired by my son for learning to ride. How he learnt walking though he used to fall again and again? Today it is for the first time,I've taken my Scooty to office. Feeling very nice :) My dream came true and it is because of my son and with support of my dear hubby,my parents and my brother. Thanks to all of them!!

December 19, 2010

ಪುಟ್ಟನ ಪ್ರಶ್ನೆ -- 2

ಪುಟ್ಟನಿಗೆ ಹೇಳಿಕೊಟಿದ್ದೆ, "ರೆಡ್ ಸಿಗ್ನಲ್" ಬಂದಾಗ ಅಪ್ಪ ಕಾರ್ ನಿಲ್ಲಿಸ್ತಾರೆ, "ಗ್ರೀನ್ ಸಿಗ್ನಲ್ " ಬಂದಾಗ ಹೊರಡ್ತಾರೆ ಅಂಥಾ, ಅದಕ್ಕೆ ಈಗ ಕಾರ್ ನಿಲ್ಲಿಸ್ದಾಗ್ಲೆಲ್ಲ ಪುಟ್ಟಾ ಕೇಳ್ತಾನೆ, "ಅಮ್ಮಾ, ಈಗ ರೆಡ್ ಸಿಗ್ನಲ್ ಬಂದಿದ್ಯಾ?" [ಅದು ಎಲ್ಲೇ ಆಗಿರ್ಲಿ:)]

...ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದಾ!!


"ಬಾನದಾರಿ ಸೂರಿ ಜಾರಿ ಹೋದಾ, ಚಂದ ಮೇಲೆ ಬಂದಾ, ಮಿನ್ನುಗಾರೆ ಅಂದಾ , ನೋಡು ಎಂಥ ಚಂದಾ,ರಾತಿಯಾಯ್ತು ಮಲಗು ನನ್ನ ಪುಟ್ಟ ಕಂದಾ"  ಇದೇನು ಇಷ್ಟು ತೊದಲು ತೊದಲಾಗಿ, ತಪ್ಪು ತಪ್ಪಾಗಿ ಬರೆಯುತ್ತಿದ್ದಾಳೆ ಅಂದುಕೊಂಡ್ರಾ? ಒಂದೂವರೆ ವರ್ಷದ ಮಗು ಇದಕ್ಕಿಂತ ಚೆನ್ನಾಗಿ ಬರೆಯಲು ಸಾಧ್ಯಾನ? ಹಾಗಾದರೆ ಬರೆಯಿತ್ತಿರೋಳು ಒಂದೂವರೆ ವರ್ಷದ ಮಗುನಾ ಅಂದುಕೊಂಡ್ರೆ ಅದು ತಪ್ಪು ಕಣ್ರೀ !! ಇದನ್ನು ಬರೆಯುತ್ತಿರೋಳು, ಅಂಥದೇ ಒಂದು ಮುದ್ದು ಮಗುವಿನ ಪ್ರೀತಿಯ ಅಮ್ಮ.



ಈಗ ಹಿಂದಿನ ಅಲ್ಲಾ, ಅದರ ಹಿಂದಿನ ಭೂಮಿ ಹುಣ್ಣಿಮೆಯಂದು ಆಯ್ತು ನನ್ನ ಪುಟ್ಟ ಚಂದಿರ "ಚಿರಾಗ್ " ನ ಉದಯ. ಇವತ್ತು ಎರಡನೆಯ ಭೂಮಿ ಹುಣ್ಣಿಮೆ ಸಮೀಪಿಸುತ್ತಿರುವ ಸಮಯದಲ್ಲಿ, "ಬಾನದಾರಿಯಲ್ಲಿ  ..." ಹೇಳುವಷ್ಟು ದೊಡ್ಡವನಾಗಿದ್ದಾನೆ ಅಂದರೆ ನಂಬಲೇ ಬೇಕಾದ ಸತ್ಯ. ನಿಜ, ಮಕ್ಕಳೇ ಹಾಗೆ ಅಲ್ಲವೇ ? ನೋಡ ನೋಡುತ್ತಾ ಅಂಬೆಗಾಲಿಕ್ಕಿ, ಕುಳಿತು, ನಿಂತು, ಎದ್ದು ಓಡಾಡಲು ಪ್ರಾರಂಭಿಸಿ ಬಿಡುತ್ತಾರೆ. ಎಲ್ಲ ನಿನ್ನೆ ಮೊನ್ನೆಯ ಹಾಗೆ ಅನಿಸುತ್ತದೆ.

ಒಂದು ಅಧ್ಯಯನದ ಪ್ರಕಾರ, ಮಕ್ಕಳು ಬೆಳೆದಂತೆ, ಬರಿಯ ದೈಹಿಕ ಬೆಳವಣಿಗೆ ಅಷ್ಟೇ    ಅಲ್ಲ, ಮಾನಸಿಕವಾಗಿಯೂ ಅಲ್ಲೊಂದು ವ್ಯಕ್ತಿ ರೂಪುಗೊಳ್ಳುತ್ತಿರುತ್ತಾನೆ. ಪ್ರತಿಯೊಂದು ನಿಮಿಷವೂ ಹೊಸದನ್ನು ಕಲಿಯುವ, ತಿಳಿಯುವ ಕುತೂಹಲ. ಬಹುಷಃ ಪ್ರಪಂಚದಲ್ಲಿ ಮಕ್ಕಳಷ್ಟು ದೊಡ್ಡ ವಿಜ್ಞಾನಿಗಳು ಬೇರೊಬ್ಬರು ಇರಲಾರರು, ಜೀವನವೇ ಒಂದು ಪ್ರಯೋಗಶಾಲೆ ಅವರಿಗೆ.

  
ಪ್ರತಿಯೊಂದು  ಮಗುವಿನ ನಿಜವಾದ ಬೆಳವಣಿಗೆ ಗರ್ಭದೊಳಗಿಂದ ಶುರು ಎಂದು ಎಲ್ಲೋ ಓದಿದ್ದ ನಾನು, ನಮ್ಮ ಮನೆಯವರು ಹೊಟ್ಟೆಯೊಳಗಿನ ಕೂಸಿನೊಂದಿಗೆ ಮಾತನಾಡುತ್ತಿದ್ದ ಪರಿ ಕಂಡು,ಕೆಲವರು ನಕ್ಕಿದ್ದುಂಟು.ಆದರೆ ಅದರ ಪರಿಣಾಮವೇ ,ನಮ್ಮ ಮಗ ವರ್ಷದೊಳಗೆ ಮಾತನಾಡುವಂತೆ ಮಾಡಿತೆಂದು ನಾವು ಖುಷಿ ಪಡುತ್ತೇವೆ.ಇನ್ನು ನೆನಪಿನ ಶಕ್ತಿ ಚೆನ್ನಗಿರಲೆಂದು ಗರ್ಭಿಣಿಯಿದ್ದಾಗ ಒಂದೆಲಗದ ಕಷಾಯ, ರಸ ಸೇವನೆ, ಉನ್ನತ ವಿಚಾರ, ಸಂಗೀತ ಆಲಿಕೆ,ಒಳ್ಳೆಯ ಪುಸ್ತಕಗಳ ಓದು ಹೀಗೆ ಹತ್ತು ಹಲವು ಸರ್ಕಸ್ ಗಳು.  ಇಲ್ಲಿ ಒಂದು ಚಿಕ್ಕ ವಿಷಯ ನೆನಪಾಗುತ್ತಿದೆ. ಗರ್ಭಿಣಿಯಿದ್ದಾಗ ಮಲಗುವ ಕೋಣೆಯನ್ನು ಮಕ್ಕಳ ಇಲ್ಲಾ ದೇವರ ಪಟಗಳನ್ನು ಹಾಕಿ ಸಿಂಗರಿಸುವುದು ಸಾಮಾನ್ಯ. ಆದರೆ ನನಗೆ ಅನಿಸಿದ್ದು, ಮತ್ತು ಹಾಕಿದ್ದು, ಫ್ರಾನ್ಸ್ ದೇಶದ, Le Mount Blanc (ಲೀ ಮೌಮ್ ಲಾ) ಚಿತ್ರವನ್ನು. ಏಕೆಂದರೆ, ನಾನು ಅದನ್ನು ನೋಡುತ್ತಿದ್ದರೆ, ನನ್ನ ಮಗ ಅಲ್ಲಿನ ಹಿಮದ ರಾಶಿಯಂತೆ ಶೀತಲ ಮನಸ್ಸಿನವನಾಗಿ, ಮುಗಿಲೆತ್ತರಕ್ಕೆ ಕೀರ್ತಿ ಶಿಖರವೇರಿ, ಆ ಪರ್ವತದಷ್ಟು ವಿಶಾಲವಾದ ಮನೋಭಾವದವನಾಗಲಿ ಎಂದು. ಮೊದಲೇ ತಾಯಂದಿರು ಮಕ್ಕಳ ವಿಷಯದಲ್ಲಿ ಸ್ವಾರ್ಥಿಯರು, ನನ್ನದು ಸ್ವಲ್ಪ ಅತಿಯಾಯಿತು ಅನಿಸುತ್ತಾ?

ತೊದಲು ನುಡಿ, ಪುಟ್ಟ ಪುಟ್ಟ ಹೆಜ್ಜೆಯ ಓಡಾಟ, " ಅಮ್ಮ, ಆಫೀಸು ಹೋಗು" ಎಂಬ ಹಿತವಾದ ಬೈಗಳು, ಇವೆಲ್ಲ ಹೀಗೇ ಇರಲಿ ಅನಿಸುತ್ತಿರುವಾಗಲೇ, ಎರಡನೆಯ ಭೂಮಿ ಹುಣ್ಣಿಮೆ ಬರಬಾರದು ಅನಿಸುತ್ತಿದೆ. ಆ ಮುಗ್ದ ನಗು, ಆ ಸುಂದರ ತೊದಲು ಮಾತು, ಆ ಅಕ್ಕರೆಯ ಮಾತು, ಆ ಹಿತವಾದ ಸ್ಪರ್ಶ .... ಅನುಬಹವಿದವರಿಗಷ್ಟೇ ಗೊತ್ತು ಅದರ ಸುಖ. ಅಂಥಹ ಸುಂದರ ಪ್ರಪಂಚಕ್ಕೆ ಕರೆದೊಯ್ದ "ನನ್ನ ಪುಟ್ಟ ಕಂದ"ನಿಗೊಂದು ದೊಡ್ಡ ಧನ್ಯವಾದ, "ಚಿರಾಗ್! ಅಮ್ಮನ ಪ್ರೀತಿ ಬಂಗಾರಿ "

[ವಿ.ಸೂ. ಮಗ ಚಿರಾಗ್ ನಿಗೆ ಒಂದೂವರೆ ವರ್ಷ ಆದಾಗ ಬರೆದ ಒಂದು ಸಣ್ಣ ಲೇಖನ (೧೪-ಏಪ್ರಿಲ್-೨೦೧೦ ರಂದು) ]









December 17, 2010

ಪುಟ್ಟನ ಪ್ರಶ್ನೆ-- 1

ನಾ ಹೇಳಿದೆ, ಪುಟ್ಟಾ ನೀರಿನ ಬಾಟಲ್ ಕಾರ್ ಸೀಟ್ ಹಿಂದೆ ಸಿಕ್ಸು ಅಂಥಾ, ಅವ ಕೇಳಿದ ಅಮ್ಮಾ ನೈನ್ ಅಲ್ಲಾ?
ಯೋಚಿಸಿದೆ, ಏನು ಕೇಳುತ್ತಿದ್ದಾನೆ ಅಂಥಾ, ಗೊತ್ತಾಯ್ತು... ನಾನು ಹೇಳಿದ ಕನ್ನಡ ದ ಸಿಕ್ಸು ಅವನಿಗೆ Enlgish Six  ಆಯ್ತು ಅಂಥಾ !!

ತಂತ್ರಜ್ಞಾನ ಎಂಬ ಮಾಯೆ

ತುಂಬಾ ದಿನಗಳಿಂದ ನನ್ನ ಮನಸ್ಸನ್ನು ಕೊರೆಯುತ್ತಿದ್ದ ಒಂದು ಮಾಯೆಯ ಬಗ್ಗೆ ಸ್ವಲ್ಪ ಗೀಚಬೇಕು ಅನ್ನಿಸ್ತಿದೆ. ಅದು ಏನಪ್ಪಾ ಅಂದ್ರೆ ಹೆಚ್ಹುತ್ತಿರುವ ತಂತ್ರಜ್ಞಾನ ದ ಬಗ್ಗೆ....
ದಿನ ದಿನವು ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿವೆ, ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಇವಕ್ಕೆಲ್ಲಾ ಕೊನೆ ಎಲ್ಲಿ?ಇವು ಎಷ್ಟು ದಿನ ಹೀಗೆ ಮುಂದುವರೆಯುತ್ತವೆ ??ಮನುಷ್ಯ ಇನ್ನು ಎಷ್ಟು ದಿನ ಇವುಗಳ ಬೆನ್ನು ಹತ್ತಿ ಹೋಗುತ್ತಾನೆ ??? ಬಹುಷಃ ಉತ್ತರ ಇಲ್ಲದ ಪ್ರಶ್ನೆಗಳು!!!
ಕೆಲವೊಂದು ಚಿಕ್ಕ ಉದಾಹರಣೆಗಳನ್ನು ಕೊಡುತ್ತೇನೆ.
೧. ನಾನು ಇಂಜಿನಿಯರಿಂಗ್ ಓದುತ್ತಿದ್ದಾಗ, ಮೂರನೇ ವರ್ಷದಲ್ಲಿ ಅಂದ್ರೆ ೨೦೦೩ ರಲ್ಲಿ ನನ್ನ ಮೊದಲ ಮೊಬೈಲ್ ಫೋನ್   ತೆಗದು ಕೊಂಡಿದ್ದೆ.ನೋಕಿಯಾ ೧೧೦೦. ಆಗ ಇದ್ದದ್ದು ನೋಕಿಯಾ ಮತ್ತು ಮೋಟೊರೋಲ ಮಾತ್ರ. ನೋಕಿಯಾ ಸ್ವಲ್ಪ ದುಡ್ಡಿರುವವರ ಸೆಟ್ , ಮೋಟೊರೋಲ ಸ್ವಲ್ಪ ಕಡಿಮೆ ಇರುವವರ ಸೆಟ್.  ಅದು ಆಗ ತಾನೆ ಮಾರುಕಟ್ಟೆಗೆ ಬಿಡುಗಡೆಯಾದ ಮೊಬೈಲ್. ಅದರ ಬೆಲೆ ಆಗ ೭೪೦೦/- ಹಾಗಂತ ಅದರಲ್ಲಿ ಇದ್ದದ್ದು ಕೇವಲ ಫೋನ್ ಮಾತ್ರ, ರೇಡಿಯೋ ಅಥವಾ ಇನ್ನೇನೋ ಇರಲಿಲ್ಲ. ಅದೇ ಮಾಡೆಲ್ ಅನ್ನು ಇಂದಿನ ಮಾರುಕಟ್ಟೆಯಲ್ಲಿ ಕೇಳುವವರಿಲ್ಲ....ಏಕೆಂದರೆ ಈಗ ಸ್ಮಾರ್ಟ್ ಫೋನ್ ಗಳ ಕಾಲ :)
೨. ಇನ್ನೊಂದು ಮೊಬೈಲ್ ಸರ್ವಿಸ್ ಪ್ರೊವೈಡರ ಬಗ್ಗೆ...ಆಗ ಮೊಬೈಲ್ ನಂಬರ್ ನೋಡಿಯೇ ಯಾವ ಸರ್ವಿಸ್ ಪ್ರೊವೈಡರ ಅಂತ ಸುಲಭವಾಗಿ ಹೇಳಬಹುದಿತ್ತು. ೯೪೪೮..... ಅಂದ್ರೆ ಬಿ ಎಸ್ ಏನ್ ಎಲ್ (BSNL ) , ೯೮೪೫.....ಅಂದ್ರೆ ಏರ್ ಟೆಲ್(AirTel), ೯೮೮೬....ಅಂದ್ರೆ ಹಚ್ (Hutch) ಅಂತ. ಇದ್ದಿದ್ದೆ ಅವು ಮೂರು. ಆದ್ರೆ ಈಗ... ನನಗಂತೂ ಸಾಧ್ಯವಿಲ್ಲ. ಬಹುಷಃ ಅದಕ್ಕೆ ಪರಿಹಾರ ಮೊಬೈಲ್ ನಂಬರ್ portability ಇರಬೇಕು :)
೩. ನನ್ನ ಮೊದಲ ಕಂಪ್ಯೂಟರ್ ಕೂಡಾ ೨೦೦೩ ರಲ್ಲೇ ತೆಗದುಕೊಂಡದ್ದು. ಆಗ ಅದರಲ್ಲಿ ಇದ್ದದ್ದು ಟೋಟಲ್ ೨೦ GB ಹಾರ್ಡ್ ಡಿಸ್ಕ್ ಮತ್ತೆ ೨೫೬ MB RAM . ಅದೇ ಈಗ ?ಲ್ಯಾಪ್ ಟಾಪ್ ಅಲ್ಲಿ ೪೦೦ GB ಸ್ಪೇಸ್ ಇದ್ರೂ, ೧ TB external ಹಾರ್ಡ್ ಡಿಸ್ಕ್ ಬೇಕು...ಮನೆಗೊಂದು SAN storage ಬಂದ್ರು ಆಶ್ಚರ್ಯ ಇಲ್ಲಾ.. :)
ಇವೆಲ್ಲ ಒಂದೆರಡು ಉದಾಹರಣೆಗಳು ಮಾತ್ರ..ಇನ್ನು ಬೇಕಾದಷ್ಟು ನಿಮ್ಮಲ್ಲಿಯು ಇರಬಹುದು... ಕೊನೆಗೂ ಉತ್ತರ ಇಲ್ಲದ ಪ್ರಶ್ನೆಗಳು ... ಇನ್ನು ಎಷ್ಟು ದೂರ ಸಾಗುವುದಿದೆ ತಂತ್ರಜ್ಞಾನ ಎಂಬ ಮಾಯೆಯ ಬೆನ್ನು ಹತ್ತಿ ? ಇವಕ್ಕೆಲ್ಲಾ ಕೊನೆ ಎಲ್ಲಿ ???

December 16, 2010

ಮೊದಲ ಹನಿ ಗವನ

ಮ್ಯವಾದ ಚೈತ್ರದಲ್ಲಿ
ಮೇಘಗಳ ಸಾಲಿನಿಂದ
ಶ್ ಎಂದುಸುರುತ್ತಾ
ಬಂದವನೇ ನನ್ನಿನಿಯ "ರಮೇಶ್"

ಈಗ ಸುಮಾರು ೫ ವರ್ಷದ ಹಿಂದೆ, ನಿಶ್ಚಿತಾರ್ಥ ಕ್ಕೂ ಮೊದಲು ಬರೆದ ಹನಿ ಹನಿ ಕವನ!
ಅರ್ಪಣೆ -- ರಮೇಶ್ ಗೆ :)

December 15, 2010

Finally I'm here!!

Hi All,

Though I'm in the IT field since many years, I had not much interested in creating my own blog. But, recently felt like appearing in one of the blogs.
So, finally here I'm !!

Hope to share few posts as my past time.

Regards,
Vidya