ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

April 10, 2011

ಪುಟ್ಟನ ಪ್ರಶ್ನೆ -- 7


ಪುಟ್ಟನಿಗೆ ಹೇಳಿಕೊಡ್ತಾ ಇದ್ದೆ, ಯಾರಾದ್ರು ಮನೆಗೆ ಬಂದ್ರೆ "ಬನ್ನಿ, ಕೂತ್ಕೊಳ್ಳಿ" ಹೇಳಬೇಕೆಂದು. ಪುಟ್ಟ ಹೇಳ್ದಾ, "ಸರಿ ಅಮ್ಮಾ, ಹಾಗೇ ಕೇಳ್ತಿನಿ" "good  boy" ಅಂದೆ. ಪುಟ್ಟನಿಗೆ ಖುಷಿಯಾಯ್ತು. ಆಮೇಲೆ ಕೇಳ್ದಾ, " ಅಮ್ಮಾ, ಯಾರಾದ್ರು ಮನೆಯಿಂದಾ ಹೋದ್ರೆ??"

ನಂಬಿಕೆಯೆಂಬ ನಂಬಿಕೆ

"ನಂಬಿಕೆ ಬೆಳೆಸಿ,ಉಳಿಸಿ" ಇದೇನು? ಗಿಡ ಬೆಳೆಸಿ,ಉಳಿಸಿ ಅನ್ನೋ ಥರಾ ಹೇಳ್ತಿದಿನಿ ಅಂದುಕೊಂಡ್ರಾ?ನನ್ನ ಪ್ರಕಾರ ನಂಬಿಕೆ ಅನ್ನುವುದು ಒಂದು ಗಿಡವೇ ಸರಿ.ಅದನ್ನು ಬೆಳೆಸಿ,ಉಳಿಸುವುದು ತುಂಬ ಕಷ್ಟದ ಹಾಗೂ ಒಳ್ಳೆಯ ಕೆಲಸ.

ಈ ನಂಬಿಕೆ ಅನ್ನುವುದು ಯಾವುದೇ ಸಂಬಂಧದ ಅಡಿಪಾಯ.ಹೇಗೆ ಅಡಿಪಾಯ ಗಟ್ಟಿಯಿಲ್ಲದಿದ್ದರೆ,ಮನೆ ಮುರಿದುಬೀಳುತ್ತದೆಯೋ,ಹಾಗೆ ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧವೂ ಉಳಿಯುವುದಿಲ್ಲ.ಅದು ಹೆತ್ತವರ-ಮಕ್ಕಳ ಸಂಬಂಧವಿರಬಹುದು,ಅಕ್ಕ-ತಂಗಿಯರ ಸಂಬಂಧವಿರಬಹುದು,ಗುರು-ಶಿಷ್ಯರ ಸಂಬಂಧವಿರಬಹುದು,ಗಂಡ-ಹೆಂಡತಿಯ ಸಂಬಂಧವಿರಬಹುದು.

"ನಂಬಿ ಕೆಟ್ಟವರಿಲ್ಲವೋ" ಅಂತ ದಾಸವಾಣಿಯೇ ಇದೆ.ಹಾಗಂತ ಎಲ್ಲವನ್ನೂ,ಎಲ್ಲರನ್ನೂ ನಂಬಬೇಕೆಂದಿಲ್ಲ,ಅದಕ್ಕೂ ಒಂದು ಮಿತಿಯಿರಬೇಕು.ನಾವು ಯಾರನ್ನು,ಯಾವ ಸಮಯದಲ್ಲಿ,ಎಷ್ಟು ನಂಬಬೇಕೆಂಬುದು ನಿರ್ಧರಿಸುವುದು ಸ್ವಲ್ಪ ಕಷ್ಟ ಹಾಗೂ ಅದು ಅವರವರಿಗೆ ಬಿಟ್ಟದ್ದು.

ನಂಬಿಕೆಯನ್ನು ಬೆಳೆಸುವುದು ಹಾಗೂ ಉಳಿಸುವುದು ನಮ್ಮ ಕೈಯಲ್ಲೇ ಇದೆ.ಇಲ್ಲೊಂದು ಚಿಕ್ಕ ಉದಾಹರಣೆಯನ್ನು ಕೊಡುತ್ತೇನೆ.ನನ್ನ ಮಗ ಆಟ ಆಡೋಣ ಬಾ ಎಂದು ಕರೆಯುತ್ತಾನೆ.ಆಗ ಊಟದ ಸಮಯವಾಗಿರುತ್ತದೆ ಎಂದುಕೊಳ್ಳಿ.ಆಗ ನಾನು ಅವನಿಗೆ,"ನೀನು ಊಟ ಮಾಡಿದರೆ ಆಡಲು ಬರುತ್ತೇನೆ" ಎನ್ನುತ್ತೇನೆ.ಅವನು ಊಟಕ್ಕೆ ಬರುತ್ತಾನೆ ಮತ್ತು ಊಟ ಮಾಡಿ ಮುಗಿಸುತ್ತಾನೆ.ನಂತರ ನಾನು ಅವನ ಸಂಗಡ ಆಡುತ್ತೇನೆ ಹೇಳಿದಂತೆ. ಅದೇ ರೀತಿ,ನಾನು ಅವನಿಗೆ "ಮಲಗುವ ಹೊತ್ತಾಯಿತು,ಈಗ ಮಲಗು,ಅಮೇಲೆ ಎದ್ದು ಆಡುವಿಯಂತೆ"ಅಂದರೆ,ಅವನೂ ನನಗೆ ಹೇಳುತ್ತಾನೆ," ಒಂದು ಸಲ ಆಡಿ, ಮಲಗುತ್ತೇನೆ".ಸರಿ ಎಂದಾಗ,ಒಂದು ಸಲ ಆಡಿ,ಮಲಗುತ್ತಾನೆ.

ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ,ಪರಸ್ಪರ ನಂಬಿಕೆ.ಊಟ ಮಾಡಿದರೆ,ಅಮ್ಮ ಆಡಲು ಬರುತ್ತಾಳೆ ಎಂಬ ನಂಬಿಕೆ ಮಗನಿಗೆ,ಮಗ ಆಡಿ ಮಲಗುತ್ತಾನೆ ಎಂಬ ನಂಬಿಕೆ ಅಮ್ಮನಿಗೆ.ಇಲ್ಲಿರುವ ಇನ್ನೊಂದು ಸಂಗತಿ ಏನೆಂದರೆ,ಇಬ್ಬರೂ ಒಬ್ಬರಿಗೊಬ್ಬರಲ್ಲಿ ನಂಬಿಕೆ ಬೆಳೆಸಿಕೊಂಡಿರುವುದು ಹಾಗೂ ಉಳಿಸಿಕೊಂಡಿರುವುದು.

ಮೇಲಿನ ಸನ್ನಿವೇಶದಂತೆ,ನಾವು ದಿನನಿತ್ಯ ಅನೇಕ ಸನ್ನಿವೇಶಗಳನ್ನು ಎದುರಿಸುತ್ತಿರುತ್ತೇವೆ.ಎಂತಹ ಸಂದರ್ಭದಲ್ಲೂ, ನಂಬಿಕೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.ಆದ್ದರಿಂದ ನಾವೆಲ್ಲರೂ ನಂಬಿಕೆಯನ್ನು ಬೆಳೆಸುವುದರಲ್ಲಿ ಹಾಗೂ ಉಳಿಸುವುದರಲ್ಲಿ ನಂಬಿಕೆಯನ್ನು ಇಡೋಣ,ಆಗಬಹುದಾ??

April 4, 2011

ಹನಿಗವನ

ನವ - ವಸಂತ
ಜೊತೆಯಲಿ ಕಳೆದವು
ವಸಂತಗಳೈದು,
ಆದರೂ ಬರಲಿರುವ
ವಸಂತ ಇನ್ನೂ ಹೊಸದರಂತೆ!!

ಪ್ರತಿಯೊಂದು ಹೆಜ್ಜೆಗೆ
ಗೆಜ್ಜೆಯ ದನಿಯಾಗಿ,
ಹೊರಟಿದೆ ಜೀವನ ರಥ
ಸುಗಮ ಪಥದಲ್ಲಿ!!

ಒಂದಾಗಿ ಕಂಡಂತ
ಸಾವಿರ ಕನಸುಗಳು,
ನನಸಾಗಿವೆ ಕೆಲವು
ಇನ್ನೂ ಉಳಿದಿವೆ ಹಲವು!!

ಮುಂದಡಿ ಇಟ್ಟಂತೆ
ನೆಲೆಸಲಿ ಸುಖ-ಶಾಂತಿ,
ಬೆಳಗಲಿ ಜೀವನ ಜ್ಯೋತಿ
ಆ ದೇವನ ಕ್ರಪೆಯಿಂದ,ಕಟಾಕ್ಷದಿಂದ!!

[ ಏಪ್ರಿಲ್ ೩, ೨೦೧೧ ಕ್ಕೆ ಜೊತೆಯಾಗಿ ೫ ವಸಂತಗಳನ್ನು ಪೂರೈಸಿದ ಸಮಯದಲ್ಲಿ ಗೀಚಿದ್ದು ]

March 24, 2011

ಬಿಟ್ಟಿ ಸಲಹೆ -- 3

ಹೊಟ್ಟೆ ನೋವಿಗೆ:

ಹೊಟ್ಟೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದರೆ, ೮-೧೦ ಮೆಂತ್ಯದ ಕಾಳುಗಳನ್ನು ಮಜ್ಜಿಗೆಯಲ್ಲಿ ೧೫ ನಿಮಿಷ ನೆನೆಸಿ, ಕುಡಿದರೆ (ಮೆಂತ್ಯದ ಸಹಿತ) ಹೊಟ್ಟೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಅಳಿಲು ಸೇವೆ -- 1

ಇದೊಂದು ಹೊಸ ಅಂಕಣ (?) ದ ಪ್ರಯೋಗ. ಹೆಸರೇ ಹೇಳುವಂತೆ, ಮುಂದಿನ ಪೀಳಿಗೆಗಾಗಿ ಅಥವಾ ನಮ್ಮ ಮುಂದಿನ ದಿನಗಳಿಗಾಗಿ ನನ್ನ ಚಿಕ್ಕ ಸೇವೆ. ಎಂದಿನಂತೆ ತಪ್ಪಿದಲ್ಲಿ ತಿದ್ದಿ, ಪ್ರೋತ್ಸಾಹಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರಾ ಎಂದುಕೊಳ್ಳುತ್ತಾ ...

Water purifier ನಿಂದ ಬರುವ waste ನೀರನ್ನು ನಾವು ಗಿಡಗಳಿಗೆ ಹಾಕುತ್ತೇವೆ. ನೀವು?

March 5, 2011

ಪುಟ್ಟನ ಪ್ರಶ್ನೆ -- 6


ಎಲ್ಲೋ ಮದುವೆಯೊಂದಕ್ಕೆ ಹೋಗುವುದಕ್ಕಿತ್ತು. ಪುಟ್ಟನಿಗೆ ರೆಡಿ ಮಾಡಿ, ನಾನು ರೆಡಿಯಾಗುತ್ತಾ ಇದ್ದೆ. ಪುಟ್ಟ ಅಲ್ಲೇ ಓಡಾಡುತ್ತಾ ಇದ್ದ. ನಾನು ಉಂಗುರ ತೆಗೆದು ಹಾಕಿಕೊಳ್ಳುವಾಗ ಬಂದು ನೋಡ ತೊಡಗಿದ. ಅಂದುಕೊಂಡ ಹಾಗೆ ಬಂತು ಪ್ರಶ್ನೆಯೊಂದು. " ಅಮ್ಮಾ, ಏನು ಹಾಕಿಕೊಳ್ಳುತ್ತಾ ಇದಿಯಾ?", "ಉಂಗುರ, ಪುಟ್ಟಾ", "ಅಮ್ಮಾ, ಉಗುರಲ್ಲಾ?"

ಅಂದ ಹಾಗೆ, ನಮ್ಮ ಪುಟ್ಟ ಚೌಲ ಆದ ಮೇಲೆ ಹೀಗೆ ಕಾಣಿಸ್ತಾನೆ

ಮಗು ಮತ್ತು ಅದರ ಸಂಸ್ಕಾರ


"ಜಗತ್ತು ಒಂದು ಕನ್ನಡಿ, ನೀನು ಅದನ್ನು ನೋಡಿ ನಕ್ಕರೆ, ಅದು ನಿನ್ನನ್ನು ನೋಡಿ ನಗುತ್ತದೆ, ಅತ್ತರೆ ಅದು ಅಳುತ್ತದೆ"
ನಿಜ, ಈ ಪ್ರಪಂಚವೇ ಹೀಗೆ. ಅದಕ್ಕಾಗಿ, ಯಾವಾಗಲೂ ನಗು-ನಗುತ್ತಾ ಇರಬೇಕೆಂದು ತಿಳಿದವರು ಹೇಳುವುದು. ಈ ಮಾತು ಮಕ್ಕಳಿಗೂ ಅನ್ವಯಿಸುತ್ತದೆ ಎಂಬುದು ನನ್ನ ಅನಿಸಿಕೆ. ನಾವು ಅವರೊಂದಿಗೆ ಹೇಗೆ ವ್ಯವಹರಿಸುತ್ತೇವೆಯೋ, ಹಾಗೆಯೇ ಅವರು ಪ್ರತಿಕ್ರಿಯಿಸುತ್ತಾರೆ.

"ಬೆಳೆಯುವ ಸಿರಿ ಮೊಳಕೆಯಲ್ಲಿ", "ಗಿಡವಾಗಿ ಬಗ್ಗದ್ದು, ಮರವಾಗಿ ಬಾಗೀತೆ?", ಇತ್ಯಾದಿಗಳು ಮಕ್ಕಳಿಗೆ ನಾವು ನೀಡುವ ಅಥವಾ ಮಕ್ಕಳು ಚಿಕ್ಕಂದಿನಲ್ಲಿ ಪಡೆಯುವ ಸಂಸ್ಕಾರಕ್ಕೆ ಸಂಬಂಧಪಟ್ಟ ಕೆಲವು ಉಕ್ತಿಗಳು. ಹೌದು! ಆರಂಭಿಕ ಸಂಸ್ಕಾರ, ವ್ಯಕ್ತಿಯ ಜೀವನದುದ್ದಕ್ಕೂ ಬರುವಂತದ್ದು. ಹಾಗಾದರೆ ಆ ಸಂಸ್ಕಾರ ಹೇಗಿರಬೇಕು? ಇಲ್ಲಿವೆ ಕೆಲವು ಸಲಹೆಗಳು, ಅನುಕರಿಸಿದಲ್ಲಿ, ಮಗುವನ್ನು ಒಳ್ಳೆಯ ಸಂಸ್ಕಾರವಂತನನ್ನಾಗಿ ಮಾಡುವತ್ತ ಸಹಕರಿಸಬಹುದು.
  • ಮಗುವಿಗೆ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಸಿ
  • ಭಯ ಬೇರೆ, ಗೌರವ ಬೇರೆ. ಮಗುವನ್ನು ಹೆದರಿಸಿ ಹೇಳಬೇಡಿ, ಪ್ರೀತಿಯಿಂದ ಹೇಳಿ
  • ಮಗು ಹಠ ಮಾಡಿದಾಗ, ಸಾಧ್ಯವಾದಷ್ಟು ತಿಳಿಸಿ ಹೇಳಲು ಪ್ರಯತ್ನಿಸಿ
  • ಯಾವುದೇ ಆಟಿಕೆಯನ್ನು ಕೊಡಿಸುವಾಗ, ಸ್ವಲ್ಪ ವಿಚಾರ ಮಾಡಿ, ಕೊಡಿಸಬೇಕೇ, ಬೇಡವೇ ಎಂದು
  • ಮಗುವಿಗೆ ಆರಂಭದಿಂದಲೇ ಸ್ವಚ್ಛತೆಯನ್ನು ಕಲಿಸಿ
  • ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡಬಾರದೆಂದು ತಿಳಿಹೇಳಿ
  • ಇತರರಿಗೆ ಹೊಡೆಯುವುದು,ಒದೆಯುವುದು, ಬೈಯ್ಯುವುದು ಮುಂತಾದವುಗಳನ್ನು ಮಾಡಬಾರದೆಂದು ಹೇಳಿ
  • ಇತರ ಮಕ್ಕಳೊಡನೆ ಹೋಲಿಕೆ ಬೇಡ, ನಿಮ್ಮ ಮಗುವಿನ ಸಾಮರ್ಥ್ಯದ ಅರಿವು ಮಾಡಿಕೊಡಿ
  • ಮಗು ಸೋತಾಗ, ಯಾಕೆಂದು ತಿಳಿಸಿ, ಗೆದ್ದಾಗ ಹುರಿದುಂಬಿಸಿ
  • ಕಳ್ಳತನ, ಸುಳ್ಳು ಹೇಳುವುದು, ಚಾಡಿ ಹೇಳುವುದು ಮುಂತಾದವು ಕೆಟ್ಟ ಅಭ್ಯಾಸಗಳೆಂದು ಹೇಳಿ
  • ತನ್ನಿಂದ ತಪ್ಪಾದಾಗ, ತಪ್ಪನ್ನು ಒಪ್ಪಿಕೊಳ್ಳಲು ಕಲಿಸಿ, ಅದರಿಂದ ಯಾರೂ ಚಿಕ್ಕವರಾಗುವುದಿಲ್ಲ, ಬದಲಿಗೆ ಘನತೆ ಹೆಚ್ಚಾಗುತ್ತದೆ ಎಂದು ತಿಳಿಸಿ
  • ಇವೆಲ್ಲಕ್ಕಿಂತ ಮೊದಲು, ನಾವು ಮೇಲ್ಕಂಡ ಅಂಶಗಳನ್ನು ಪಾಲಿಸಿದರೆ, ಮಕ್ಕಳು ತಮಗೆ ತಾವೇ ಅನುಸರಿಸುತ್ತವೆ

February 3, 2011

ಹನಿಗವನ

ನನ್ನ ಗೀಚುವಿಕೆಗೆ ಮತ್ತೆ ರಮೇಶ್ ಬಲಿ :)

ಸಖಿ - ಸುಖಿ
ಆತ ಸಖ, 
ನಾನು ಸಖಿ!
ಆತ ನನ್ನವ,
ನಾನು ಸುಖಿ !

January 19, 2011

ನಾನು ಪೈಲಾ ಬಿದ್ದಿದ್ದು!!

ಆವತ್ತು ಮನೆಗೆ ಯಾರೋ ಅತಿಥಿಗಳು ಬರುವವರಿದ್ದರು ಅಂತಾ ಆಫೀಸಿನಿಂದ ದಿನದಕ್ಕಿಂತ ೧೦ ನಿಮಿಷ ಮೊದಲೇ ಹೊರಟಿದ್ದೆ. ತಲೆಯ ತುಂಬಾ, ರಾತ್ರಿ ಊಟಕ್ಕೆ ಏನೇನು ಮಾಡಬೇಕೆಂಬ ಯೋಚನೆ ಕೊರೆಯುತ್ತಿತ್ತು.

ಎಂದಿನಂತೆ, ನಾನು ಗಾಡಿ ನಿಲ್ಲಿಸುವ ಜಾಗದಲ್ಲಿ ಬರೆದಿದ್ದ "Please lock your 'helemate'" ಅನ್ನು ಓದಿ, ಹೆಲ್ಮೆಟ್ ಹಾಕಿಕೊಂಡು, ಇನ್ನೇನು ಗಾಡಿ ಸ್ಟಾರ್ಟ್ ಮಾಡಬೇಕು, ದೃಷ್ಟಿ ಪೆಟ್ರೋಲ್ ಮೀಟರ್ ನತ್ತ ಹೋಯಿತು, ನೋಡುತ್ತೇನೆ ಅದರ ಕಡ್ಡಿ ತೆಪ್ಪಗೆ "E" ಬಂದು ಕುಳಿತುಬಿಟ್ಟಿದೆ.  ಕ್ಷಣ ದಿಗಿಲಾಯಿತು, "ಅಯ್ಯೋ ದೇವರೇ!ಈಗೇನು ಮಾಡುವುದು?" "E ಅಂದ್ರೆ, ಪೂರ್ತಿ ಖಾಲೀನಾ?" " ಈ ಸ್ಕೂಟಿಯಲ್ಲಿ ಬೇರೆ reserve concept ಇದೆಯೋ ಗೊತ್ತಿಲ್ಲಾ, ಸ್ವಲ್ಪನಾದ್ರೂ ಓಡುತ್ತಾ? ಕೊನೇಪಕ್ಷ ಕ್ಯಾಂಪಸ್ನಿಂದ ಹೊರಗೆ ಇರುವ ಪೆಟ್ರೋಲ್ ಬಂಕ್ ವರೆಗಾದ್ರೂ ಹೋಗುತ್ತಾ?" "ಅಲ್ಲಿವರೆಗಾದ್ರೂ ಹೋಗಿದ್ರೆ, ಪೆಟ್ರೋಲ್ ಹಾಕಿಸ್ಕೊಂಡು ಹಾಗೆ ಹೋಗಬಹುದಿತ್ತು !!"
 "ಇಲ್ಲಾ ಅಂದ್ರೆ ಪೆಟ್ರೋಲ್ ಬಂಕ್ ವರೆಗೂ ನಡೆದುಕೊಂಡು ಹೋಗಿ ಬಾಟಲ್ನಲ್ಲಿ ತುಂಬಿಸಿಕೊಂಡು ಬಂದ್ರೆ!?" " ಛೆ! ಈಗ ಬಾಟಲ್ನಲ್ಲಿ ಪೆಟ್ರೋಲ್/ಡಿಸೇಲ್ ಕೊಡೋಲ್ಲ ಅಂತಾ ಕೇಳಿದೀನಿ " ಹೀಗೆ ೫ ನಿಮಿಷದಲ್ಲಿ ತಲೆಯಲ್ಲಿ ಹತ್ತೆಂಟು ಯೋಚನೆಗಳು.

ಏನಾಗ್ಲಿ, ಯಾವ್ದಕ್ಕೂ ಒಂದ್ಸಲ ರಮೇಶ್ ಗೆ ಕೇಳೋಣ ಅಂದ್ಕೊಂಡು ಫೋನ್ ಮಾಡಿದ್ರೆ, ಆಸಾಮಿ ಫೋನ್ ಎತ್ತತಾನೆ ಇಲ್ಲ. ಇನ್ನೇನು, ಅವರು ಅದನ್ನೇ ಹೇಳ್ತಾರೆ " ಪೆಟ್ರೋಲ್ ಬಂಕಿನವರೆಗೂ ಹೋಗುತ್ತಾ ನೋಡು" ಅಂತಾ ಅಂದ್ಕೊಂಡು ಇನ್ನೊಂದು ಸಲ ಟ್ರೈ ಮಾಡೋಣ ಅಂತಾ ಫೋನ್ ಎತ್ಕೊಂಡೆ.

"ಹಲೋ"
"ಹಲೋ, ರ್ರೀ ಗಾಡಿಯಲ್ಲಿ ಪೆಟ್ರೋಲ್ ಫುಲ್ ಖಾಲಿ ಆಗೋಜು"
"ಹೆಂಗೊತ್ತಾತು"
"ಅದ್ರ ಕಡ್ಡಿ E ಗೆ  ಬಂದೊಜು!!"
"ಹ್ಮ!! ಒಂದ್ ಬಾರಿ ಗಾಡಿ ಸ್ಟಾರ್ಟ್ ಮಾಡು"
"ಅದರಿಂದ ಎಂತಾ ಆಗ್ತು, ಪೆಟ್ರೋಲೇ ಇಲ್ಲೆ"
"ನೀ ಸ್ಟಾರ್ಟ್ ಮಾಡಿ ಫೋನ್ ಮಾಡು "
"ಸರಿ"
ಫೋನ್ ಕಟ್ ಮಾಡಿ, ಗಾಡಿ ಸ್ಟಾರ್ಟ್ ಮಾಡ್ದೆ, ಗಾಡಿ ಏನೋ ಸ್ಟಾರ್ಟ್ ಆಯ್ತು. ಪುನಃ ಫೋನ್ ಮಾಡ್ತಾ ನೋಡ್ತಿನಿ, ಕಡ್ಡಿ ನಿಧಾನಕ್ಕೆ ಮೇಲೆ ಏರಿ "F " ಹತ್ರ ನಿಲ್ಬೇಕೆ? ಇದೇನಾಶ್ಚರ್ಯ!!
"ರ್ರೀ, ಈಗ ಕಡ್ಡಿ "F " ಹತ್ರ ಬೈಂದು"
"ಹಿ ಹಿ ಹಿ "
"ನಗದೆಂತಕ್ಕೆ?"
"ಅಯ್ಯೋ ಮಳ್ಳು, ಗಾಡಿ ಬಂದ್ ಇದ್ದಾಗ E ಹತ್ರಾನೆ ಇರ್ತು,ಸ್ಟಾರ್ಟ್ ಮಾಡಿದ್ಮೇಲೆ ಸರಿ ತೋರಸ್ತು. ಈಗ ನಿಧಾನಕ್ಕೆ ಹೊರಟು ಬಾ ನೀನು ಮನೆಗೆ "
ನಾನು ಪೆಚ್ಚು ಮೋರೆ ಹಾಕಿಕೊಂಡು "ಹೌದಾ?" ಅನ್ನುವಷ್ಟರಲ್ಲಿ ಅವರು ಫೋನ್ ಇಟ್ಟಾಗಿತ್ತು.

ಒಟ್ಟಿನಲ್ಲಿ, ಒಂದು ಹೊಸ ಅನುಭವದ ಜೊತೆಗೆ, ನಗುನೂ ಬಂತು.

ಈಗ ನಾನು ಎಲ್ಲಿಗಾದರೂ ಹೊರಟರೆ, ರಮೇಶ್ ಕೇಳ್ತಾರೆ " ಪೆಟ್ರೋಲ್ ಇದ್ದ ನೋಡ್ಕಂದ್ಯ? " ನಾನು ಒಮ್ಮೆ ಅವರನ್ನು ಗುರಾಯಿಸಿ, ಹೊರಡುತ್ತೇನೆ :)

[ವಿ. ಸೂ: ಪೈಲಾ ಬಿದ್ದಿದ್ದು ಅಂದ್ರೆ ಫೂಲ್ ಆಗಿದ್ದು ಅಂತಾ :) ]

January 14, 2011

ಪುಟ್ಟನ ಪ್ರಶ್ನೆ -- 5


ಬೆಳಿಗ್ಗೆ ದೇವರಮನೆ ಮುಂದೆ ರಂಗೋಲಿ ಹಾಕಿದ್ದೆ. ಸಾಯಂಕಾಲ ದೀಪ ಹಚ್ಚಲು ಹೋದಾಗ ಪುಟ್ಟನೂ ಬಂದಾ (ಸಾಮಾನ್ಯವಾಗಿ ದಿನಾಲೂ ಅವನನ್ನು ಕರೆದುಕೊಂಡೇ ದೀಪ ಹಚ್ಚುತ್ತೇನೆ). ಎಂದಿನಂತೆ ಈವತ್ತೂ ರಂಗೋಲಿ ನೋಡಿ ಖುಷಿ ಆಯ್ತು ಅವನಿಗೆ. ತಕ್ಷಣವೇ ತೂರಿಬಂತು ಒಂದು ಪ್ರಶ್ನೆ, "ಅಮ್ಮಾ, 'q' ' q' ಅಂತಾ ಬರ್ದಿದ್ದೀಯಾ ??" ಅವನಿಗೆ ನನ್ನ ರಂಗೋಲಿ ಆ ಥರಾ ಕಂಡಿದ್ದರಲ್ಲಿ ಆಶ್ಚರ್ಯ ಇಲ್ಲಾ ಅಂತಾ ನನಗೂ ಆಮೇಲೆ ಅನಿಸಿತು, ನೀವೆನಂತಿರಾ?

January 13, 2011

ಹನಿಗವನ

ನಾನು ಪಿ.ಯು.ಸಿ ಓದಿದ್ದು ಉಜಿರೆಯ SDM ಕಾಲೇಜಿನಲ್ಲಿ. ಯಲ್ಲಾಪುರದಿಂದ ಸುಮಾರು ೧೦ ಘಂಟೆಗಳ ಪ್ರಯಾಣ (KSRTC ಬಸ್ಸಿನಲ್ಲಿ ಎನ್ನುವುದು ಬೇರೆ ವಿಷಯ) ಆ ಸಮಯದಲ್ಲಿ ಬಸ್ಸಿನಲ್ಲಿ ಕುಳಿತು ಬರೆದ ಒಂದು ಚುಟುಕು.

ವಿಪರ್ಯಾಸ

" ಈ ಬಸ್ಸಿನ
ಪ್ರಯಾಣವೇ ಹೀಗೆ,
ಮುಗಿಯುವುದೇ ಇಲ್ಲ,
ಎಂದು ಗೊಣಗುತ್ತಿದ್ದವನ
ಬದುಕಿನ ಪ್ರಯಾಣವನ್ನೇ
ವಿಧಿ ಆಕ್ಸಿಡೆಂಟಿನ
ರೂಪದಲ್ಲಿ ಮುಗಿಸಬೇಕೇ ?!!"

January 12, 2011

ಬಿಟ್ಟಿ ಸಲಹೆ -- 2

ಹಿಮ್ಮಡಿ ಒಡೆಯುವಿಕೆಗೆ:

ಕಾಲಿನ ಹಿಮ್ಮಡಿ ಒಡೆದು ತೊಂದರೆಯಾಗುತ್ತಿದ್ದರೆ, ಹೂಬಿಸಿ ನೀರಿನಲ್ಲಿ ಕಾಲು ಇಳಿಬಿಟ್ಟು, ಸ್ವಲ್ಪ ಸಮಯದ ನಂತರ ಸ್ವಚ್ಛವಾಗಿ ತೊಳೆಯಿರಿ. ನಂತರ ಲೋಳೆಸರ (ಆಲೋವೆರ) ಎಲೆಯನ್ನು ಮಧ್ಯದಲ್ಲಿ ಕತ್ತರಿಸಿ, ಲೋಳೆಯನ್ನು ಒಡೆದ ಜಾಗಕ್ಕೆ ಹಚ್ಚಿ.೩-೪ ವಾರ ಹೀಗೆ  ಮಾಡಿದಲ್ಲಿ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತ ಬರುತ್ತದೆ.

January 7, 2011

ಹೀಗೊಂದು ಮೆಲುಕು


"ಬರುತಿದೆ ಬರುತಿದೆ ಸಂಕ್ರಾಂತಿ 
ತರಲಿ ಎಲ್ಲರ ಬದುಕಲ್ಲೂ ಹೊಸ ಕ್ರಾಂತಿ !!"


ಚಿಕ್ಕವರಿರುವಾಗ, ಸಂಕ್ರಾಂತಿಗೆ ಒಂದು ವಾರವಿರುವಾಗಲೇ ನಮ್ಮ ತಯಾರಿ ಶುರು ಆಗುತ್ತಿತ್ತು. ಒಳ್ಳೆ ಬಣ್ಣದ ಡಬ್ಬಿ ತರುವುದರಿಂದ ಹಿಡಿದು, ಅದಕ್ಕೆ ಸಿಂಗರಿಸುವುದು, ಸಂಕ್ರಾಂತಿ ಕಾಳುಗಳನ್ನು ತರುವುದು, ಅದಕ್ಕೆ ಎಳ್ಳು ಹುರಿದು ಬೆರೆಸುವುದು, ಹೊಸ ಬಟ್ಟೆ ಕೊಳ್ಳುವುದು, ಕಬ್ಬು ಕಡಿದು ತರುವುದು ...ಹೀಗೆ ಹತ್ತಾರು ಕೆಲಸಗಳು.
ಸಂಕ್ರಾಂತಿಯ ಬೆಳಗು ಆಗುವುದಕ್ಕೆ ಕಾಯುತ್ತಿದ್ದೆವು. ಎದ್ದು, ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಸಂಕ್ರಾಂತಿ ಕಾಳುಗಳನ್ನು ತಂದಿಟ್ಟ ಚಂದದ ಡಬ್ಬಿಗೆ ತುಂಬಿ ಶಾಲೆಗೆ ಹೊರಡುತ್ತಿದ್ದೆವು. ಅಲ್ಲಿ ಎಲ್ಲರಿಗೂ "ಎಳ್ಳು ಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡೋಣ " ಎಂದು ಹೇಳುತ್ತಾ ಸಂಕ್ರಾಂತಿ ಕಾಳುಗಳನ್ನು ಕೊಡುವಾಗಿನ ಮಜವೇ ಬೇರೆ. ಕೊಟ್ಟ ಕಾಳುಗಳಲ್ಲಿ ಎರಡನ್ನಾದರೂ ವಾಪಾಸ್ ಕೊಡಬೇಕೆಂಬುದು ಒಂದು ಪದ್ಧತಿ ( ಈ ಪದ್ದತಿಯಿಂದಾಗಿ ತೆಗೆದುಕೊಂಡು ಹೋದ ಡಬ್ಬಿ ತುಂಬಿಯೇ ಇರುತ್ತಿತ್ತು ). ಇಡೀ ದಿನ ಬರೀ ಸಂಕ್ರಾಂತಿ ಕಾಳುಗಳನ್ನೇ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದೆವು. ಮನೆಗೆ ಬಂದರೂ ಅದೇ ಧ್ಯಾನ. ಇಷ್ಟಾದ ಮೇಲೆ, ಸಂಜೆ ಕಬ್ಬು ತಿನ್ನುವ ಕೆಲಸ. ಆ ವಾರವೆಲ್ಲಾ ಮನ-ಮನೆ ಎಲ್ಲಾ ಸಂಕ್ರಾಂತಿಮಯ. ಸಂಕ್ರಾಂತಿ ಹಬ್ಬ ಮುಗಿದಂತೆ, ಯಾಕೆ ವರ್ಷಕ್ಕೆ ಒಂದೇ ಸಂಕ್ರಾಂತಿ ಎನ್ನುವ ಬೇಸರ. ಏನೇ ಹೇಳಿದ್ರೂ, ಆ ದಿನಗಳೇ ಸೊಗಸು.

ಪ್ರತಿ ವರ್ಷದಂತೆ ಈ ವರ್ಷವೂ ಬರುತಿದೆ ಸಂಕ್ರಾಂತಿ. ಆದರೆ ಮೊದಲಿನ ಆ ಉತ್ಸಾಹ ಈಗ ಇಲ್ಲ :( ಆದರೂ, "ಕಾಲವನ್ನು ತಡೆಯೋರು ಯಾರೂ ಇಲ್ಲಾ ..." ಎಂದು ಕೊಳ್ಳುತ್ತಾ, "ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು"

ಚಿತ್ರ ಕೃಪೆ: ಅಂತರ್ಜಾಲ