ನನ್ನ ಬಗ್ಗೆ...
- ವಿದ್ಯಾ ರಮೇಶ್
- ಬೆಂಗಳೂರು , ಕರ್ನಾಟಕ, India
- ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)
February 3, 2011
January 19, 2011
ನಾನು ಪೈಲಾ ಬಿದ್ದಿದ್ದು!!
ಆವತ್ತು ಮನೆಗೆ ಯಾರೋ ಅತಿಥಿಗಳು ಬರುವವರಿದ್ದರು ಅಂತಾ ಆಫೀಸಿನಿಂದ ದಿನದಕ್ಕಿಂತ ೧೦ ನಿಮಿಷ ಮೊದಲೇ ಹೊರಟಿದ್ದೆ. ತಲೆಯ ತುಂಬಾ, ರಾತ್ರಿ ಊಟಕ್ಕೆ ಏನೇನು ಮಾಡಬೇಕೆಂಬ ಯೋಚನೆ ಕೊರೆಯುತ್ತಿತ್ತು.
ಎಂದಿನಂತೆ, ನಾನು ಗಾಡಿ ನಿಲ್ಲಿಸುವ ಜಾಗದಲ್ಲಿ ಬರೆದಿದ್ದ "Please lock your 'helemate'" ಅನ್ನು ಓದಿ, ಹೆಲ್ಮೆಟ್ ಹಾಕಿಕೊಂಡು, ಇನ್ನೇನು ಗಾಡಿ ಸ್ಟಾರ್ಟ್ ಮಾಡಬೇಕು, ದೃಷ್ಟಿ ಪೆಟ್ರೋಲ್ ಮೀಟರ್ ನತ್ತ ಹೋಯಿತು, ನೋಡುತ್ತೇನೆ ಅದರ ಕಡ್ಡಿ ತೆಪ್ಪಗೆ "E" ಬಂದು ಕುಳಿತುಬಿಟ್ಟಿದೆ. ಕ್ಷಣ ದಿಗಿಲಾಯಿತು, "ಅಯ್ಯೋ ದೇವರೇ!ಈಗೇನು ಮಾಡುವುದು?" "E ಅಂದ್ರೆ, ಪೂರ್ತಿ ಖಾಲೀನಾ?" " ಈ ಸ್ಕೂಟಿಯಲ್ಲಿ ಬೇರೆ reserve concept ಇದೆಯೋ ಗೊತ್ತಿಲ್ಲಾ, ಸ್ವಲ್ಪನಾದ್ರೂ ಓಡುತ್ತಾ? ಕೊನೇಪಕ್ಷ ಕ್ಯಾಂಪಸ್ನಿಂದ ಹೊರಗೆ ಇರುವ ಪೆಟ್ರೋಲ್ ಬಂಕ್ ವರೆಗಾದ್ರೂ ಹೋಗುತ್ತಾ?" "ಅಲ್ಲಿವರೆಗಾದ್ರೂ ಹೋಗಿದ್ರೆ, ಪೆಟ್ರೋಲ್ ಹಾಕಿಸ್ಕೊಂಡು ಹಾಗೆ ಹೋಗಬಹುದಿತ್ತು !!"
"ಇಲ್ಲಾ ಅಂದ್ರೆ ಪೆಟ್ರೋಲ್ ಬಂಕ್ ವರೆಗೂ ನಡೆದುಕೊಂಡು ಹೋಗಿ ಬಾಟಲ್ನಲ್ಲಿ ತುಂಬಿಸಿಕೊಂಡು ಬಂದ್ರೆ!?" " ಛೆ! ಈಗ ಬಾಟಲ್ನಲ್ಲಿ ಪೆಟ್ರೋಲ್/ಡಿಸೇಲ್ ಕೊಡೋಲ್ಲ ಅಂತಾ ಕೇಳಿದೀನಿ " ಹೀಗೆ ೫ ನಿಮಿಷದಲ್ಲಿ ತಲೆಯಲ್ಲಿ ಹತ್ತೆಂಟು ಯೋಚನೆಗಳು.
ಏನಾಗ್ಲಿ, ಯಾವ್ದಕ್ಕೂ ಒಂದ್ಸಲ ರಮೇಶ್ ಗೆ ಕೇಳೋಣ ಅಂದ್ಕೊಂಡು ಫೋನ್ ಮಾಡಿದ್ರೆ, ಆಸಾಮಿ ಫೋನ್ ಎತ್ತತಾನೆ ಇಲ್ಲ. ಇನ್ನೇನು, ಅವರು ಅದನ್ನೇ ಹೇಳ್ತಾರೆ " ಪೆಟ್ರೋಲ್ ಬಂಕಿನವರೆಗೂ ಹೋಗುತ್ತಾ ನೋಡು" ಅಂತಾ ಅಂದ್ಕೊಂಡು ಇನ್ನೊಂದು ಸಲ ಟ್ರೈ ಮಾಡೋಣ ಅಂತಾ ಫೋನ್ ಎತ್ಕೊಂಡೆ.
"ಹಲೋ"
"ಹಲೋ, ರ್ರೀ ಗಾಡಿಯಲ್ಲಿ ಪೆಟ್ರೋಲ್ ಫುಲ್ ಖಾಲಿ ಆಗೋಜು"
"ಹೆಂಗೊತ್ತಾತು"
"ಅದ್ರ ಕಡ್ಡಿ E ಗೆ ಬಂದೊಜು!!"
"ಹ್ಮ!! ಒಂದ್ ಬಾರಿ ಗಾಡಿ ಸ್ಟಾರ್ಟ್ ಮಾಡು"
"ಅದರಿಂದ ಎಂತಾ ಆಗ್ತು, ಪೆಟ್ರೋಲೇ ಇಲ್ಲೆ"
"ನೀ ಸ್ಟಾರ್ಟ್ ಮಾಡಿ ಫೋನ್ ಮಾಡು "
"ಸರಿ"
ಫೋನ್ ಕಟ್ ಮಾಡಿ, ಗಾಡಿ ಸ್ಟಾರ್ಟ್ ಮಾಡ್ದೆ, ಗಾಡಿ ಏನೋ ಸ್ಟಾರ್ಟ್ ಆಯ್ತು. ಪುನಃ ಫೋನ್ ಮಾಡ್ತಾ ನೋಡ್ತಿನಿ, ಕಡ್ಡಿ ನಿಧಾನಕ್ಕೆ ಮೇಲೆ ಏರಿ "F " ಹತ್ರ ನಿಲ್ಬೇಕೆ? ಇದೇನಾಶ್ಚರ್ಯ!!
"ರ್ರೀ, ಈಗ ಕಡ್ಡಿ "F " ಹತ್ರ ಬೈಂದು"
"ಹಿ ಹಿ ಹಿ "
"ನಗದೆಂತಕ್ಕೆ?"
"ಅಯ್ಯೋ ಮಳ್ಳು, ಗಾಡಿ ಬಂದ್ ಇದ್ದಾಗ E ಹತ್ರಾನೆ ಇರ್ತು,ಸ್ಟಾರ್ಟ್ ಮಾಡಿದ್ಮೇಲೆ ಸರಿ ತೋರಸ್ತು. ಈಗ ನಿಧಾನಕ್ಕೆ ಹೊರಟು ಬಾ ನೀನು ಮನೆಗೆ "
ನಾನು ಪೆಚ್ಚು ಮೋರೆ ಹಾಕಿಕೊಂಡು "ಹೌದಾ?" ಅನ್ನುವಷ್ಟರಲ್ಲಿ ಅವರು ಫೋನ್ ಇಟ್ಟಾಗಿತ್ತು.
ಒಟ್ಟಿನಲ್ಲಿ, ಒಂದು ಹೊಸ ಅನುಭವದ ಜೊತೆಗೆ, ನಗುನೂ ಬಂತು.
ಈಗ ನಾನು ಎಲ್ಲಿಗಾದರೂ ಹೊರಟರೆ, ರಮೇಶ್ ಕೇಳ್ತಾರೆ " ಪೆಟ್ರೋಲ್ ಇದ್ದ ನೋಡ್ಕಂದ್ಯ? " ನಾನು ಒಮ್ಮೆ ಅವರನ್ನು ಗುರಾಯಿಸಿ, ಹೊರಡುತ್ತೇನೆ :)
[ವಿ. ಸೂ: ಪೈಲಾ ಬಿದ್ದಿದ್ದು ಅಂದ್ರೆ ಫೂಲ್ ಆಗಿದ್ದು ಅಂತಾ :) ]
Subscribe to:
Posts (Atom)
