"ಬರುತಿದೆ ಬರುತಿದೆ ಸಂಕ್ರಾಂತಿ
ತರಲಿ ಎಲ್ಲರ ಬದುಕಲ್ಲೂ ಹೊಸ ಕ್ರಾಂತಿ !!"
ಚಿಕ್ಕವರಿರುವಾಗ, ಸಂಕ್ರಾಂತಿಗೆ ಒಂದು ವಾರವಿರುವಾಗಲೇ ನಮ್ಮ ತಯಾರಿ ಶುರು ಆಗುತ್ತಿತ್ತು. ಒಳ್ಳೆ ಬಣ್ಣದ ಡಬ್ಬಿ ತರುವುದರಿಂದ ಹಿಡಿದು, ಅದಕ್ಕೆ ಸಿಂಗರಿಸುವುದು, ಸಂಕ್ರಾಂತಿ ಕಾಳುಗಳನ್ನು ತರುವುದು, ಅದಕ್ಕೆ ಎಳ್ಳು ಹುರಿದು ಬೆರೆಸುವುದು, ಹೊಸ ಬಟ್ಟೆ ಕೊಳ್ಳುವುದು, ಕಬ್ಬು ಕಡಿದು ತರುವುದು ...ಹೀಗೆ ಹತ್ತಾರು ಕೆಲಸಗಳು.
ಸಂಕ್ರಾಂತಿಯ ಬೆಳಗು ಆಗುವುದಕ್ಕೆ ಕಾಯುತ್ತಿದ್ದೆವು. ಎದ್ದು, ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಸಂಕ್ರಾಂತಿ ಕಾಳುಗಳನ್ನು ತಂದಿಟ್ಟ ಚಂದದ ಡಬ್ಬಿಗೆ ತುಂಬಿ ಶಾಲೆಗೆ ಹೊರಡುತ್ತಿದ್ದೆವು. ಅಲ್ಲಿ ಎಲ್ಲರಿಗೂ "ಎಳ್ಳು ಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡೋಣ " ಎಂದು ಹೇಳುತ್ತಾ ಸಂಕ್ರಾಂತಿ ಕಾಳುಗಳನ್ನು ಕೊಡುವಾಗಿನ ಮಜವೇ ಬೇರೆ. ಕೊಟ್ಟ ಕಾಳುಗಳಲ್ಲಿ ಎರಡನ್ನಾದರೂ ವಾಪಾಸ್ ಕೊಡಬೇಕೆಂಬುದು ಒಂದು ಪದ್ಧತಿ ( ಈ ಪದ್ದತಿಯಿಂದಾಗಿ ತೆಗೆದುಕೊಂಡು ಹೋದ ಡಬ್ಬಿ ತುಂಬಿಯೇ ಇರುತ್ತಿತ್ತು ). ಇಡೀ ದಿನ ಬರೀ ಸಂಕ್ರಾಂತಿ ಕಾಳುಗಳನ್ನೇ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದೆವು. ಮನೆಗೆ ಬಂದರೂ ಅದೇ ಧ್ಯಾನ. ಇಷ್ಟಾದ ಮೇಲೆ, ಸಂಜೆ ಕಬ್ಬು ತಿನ್ನುವ ಕೆಲಸ. ಆ ವಾರವೆಲ್ಲಾ ಮನ-ಮನೆ ಎಲ್ಲಾ ಸಂಕ್ರಾಂತಿಮಯ. ಸಂಕ್ರಾಂತಿ ಹಬ್ಬ ಮುಗಿದಂತೆ, ಯಾಕೆ ವರ್ಷಕ್ಕೆ ಒಂದೇ ಸಂಕ್ರಾಂತಿ ಎನ್ನುವ ಬೇಸರ. ಏನೇ ಹೇಳಿದ್ರೂ, ಆ ದಿನಗಳೇ ಸೊಗಸು.
ಪ್ರತಿ ವರ್ಷದಂತೆ ಈ ವರ್ಷವೂ ಬರುತಿದೆ ಸಂಕ್ರಾಂತಿ. ಆದರೆ ಮೊದಲಿನ ಆ ಉತ್ಸಾಹ ಈಗ ಇಲ್ಲ :( ಆದರೂ, "ಕಾಲವನ್ನು ತಡೆಯೋರು ಯಾರೂ ಇಲ್ಲಾ ..." ಎಂದು ಕೊಳ್ಳುತ್ತಾ, "ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು"
ಚಿತ್ರ ಕೃಪೆ: ಅಂತರ್ಜಾಲ